ತುಮಕೂರು: ವಿಕಾರ, ವಿಕೃತ ವ್ಯಕ್ತಿತ್ವ ಉಳ್ಳಂತಹ ಮನಸ್ಸುಗಳು, ನಿಜವಾಗಲೂ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಖಂಡಿಸಿದ್ದಾರೆ.
ತುಮಕೂರಿನಲ್ಲಿ ಬಸವಣ್ಣ ಕುರಿತ ವಿವಾದಾತ್ಮಕ ಪುಸ್ತಕ ವಿಚಾರವಾಗಿ ಮಾತನಾಡಿದ ಅವರು, ಬಸವಣ್ಣನವರಿಗೆ ಇಡೀ ಪ್ರಪಂಚವೇ ಗೌರವ ಸಲ್ಲಿಸುತ್ತಿದೆ. ಇತ್ತೀಚಿಗೆ ಕೆಲ ವ್ಯಕ್ತಿಗಳು ಅವರನ್ನು ಕುರಿತು ಅವಹೇಳನಕಾರಿಯಾಗಿ ಪುಸ್ತಕ ಬರೆದಿದ್ದಾರೆ. ರವಿ ಹಂಜ್ ಎಂಬುವವರು ಬಸವ ಮಂಟಪ ಎಂಬ ಕೃತಿಯನ್ನ ರಚನೆ ಮಾಡಿ, ಅದರಲ್ಲಿ ಬಸವಣ್ಣನವರ ಬಗ್ಗೆ ಅತ್ಯಂತ ಹೀನಾಯವಾಗಿ, ನಿಂದನೀಯವಾಗಿ, ಬರೆದಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ನಾವು ಪುಸ್ತಕವನ್ನು ನೋಡಿಲ್ಲ.. ಓದಿಯೂ ಇಲ್ಲ. ಎಲ್ಲಾ ಕಡೆ ಅದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಬಸವಣ್ಣವರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಹ ವಿಚಾರಗಳು ಬಂದರೆ ಎಲ್ಲರ ಮನಸಿಗೆ ನೋವು ಆಘಾತ ಉಂಟಾಗುವುದು ಸಹಜ. ಎಲ್ಲರ ಮನಸಿಗೂ ನೋವುಂಟಾಗಿದೆ. ವಿಕಾರ, ವಿಕೃತ ವ್ಯಕ್ತಿತ್ವ ಉಳ್ಳಂತಹ ಮನಸ್ಸುಗಳು, ನಿಜವಾಗಲೂ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾವಿದನ್ನು ಖಂಡನೆ ಮಾಡುತ್ತೇವೆ.
ಸರ್ಕಾರ ಈಗಾಗಲೇ ಕೃತಿಯನ್ನು ಮುಟ್ಟುಗೋಲು ಹಾಕಿದೆ, ಇದರ ಪ್ರಕಾಶನಕ್ಕೆ ಅವಕಾಶ ಕೊಟ್ಟಿಲ್ಲ. ಅವರ ವಿರುದ್ಧ ಈಗಾಗಲೇ ಎಫ್ ಐಆರ್ ಕೂಡ ದಾಖಲಾಗಿದೆ. ವಾರೆಂಟ್ ಕೂಡ ಇಶ್ಯೂ ಆಗಿದೆ. ಸರ್ಕಾರ ಇದಕ್ಕೆ ಸ್ಪಂದಿಸಿ ಕಾನೂನಾತ್ಮಕವಾದಂತ ಕ್ರಮಗಳಿಗೆ ಮುಂದಾಗಿರುವಂಥದ್ದು ಸ್ವಾಗತ ಅರ್ಹವಾದದು. ಎಲ್ಲರೂ ಕೂಡ ಒಗ್ಗಟ್ಟಾಗಿ ಒಂದೇ ಮಾತಿನಲ್ಲಿ ಖಂಡಿಸಬೇಕಾಗಿದೆ. ರವಿ ಹಂಕ್ ವಿಕೃತಿಯ ವಿಕಾರದ ವಿಚಾರಗಳನ್ನು ಖಂಡನೀಯವಾಗಿ ತಿರಸ್ಕರಿಸುತ್ತೇವೆ.
ಕನ್ನಡ ನಾಡು ಕಂಡಂತ ಅತ್ಯಂತ ಶ್ರೇಷ್ಠ ಚಿರಸ್ಮರಣೀಯ ವ್ಯಕ್ತಿ ಕಲ್ಯಾಣದ ಬಸವಣ್ಣನವರು. ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆ ತಂದು ಕೊಟ್ಟಂತಹ ಕೀರ್ತಿ ಬಸವಣ್ಣನವರು ಹಾಗೂ ಶರಣರಿಗೆ ಸೇರಿದ್ದು. 12ನೇ ಶತಮಾನ ಯಾವ ದೃಷ್ಟಿಯಿಂದಲೂ ನೋಡಿದರು ಅದು ಬೆಳಕಿನ ಯುಗ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಎಲ್ಲಾ ದೃಷ್ಟಿಯಿಂದಲೂ ಅದೊಂದು ಬೆಳಕಿನ ಯುಗವಾಗಿದೆ. ಇಂದಿಗೂ ಕೂಡ ಅವರ ಕೊಡುಗೆಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದೆ.
ಬಸವಣ್ಣ ಯಾವುದೋ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ವಿಶ್ವಮಾನವ ವ್ಯಕ್ತಿತ್ವ ಅವರದ್ದು, ಅವರು ವಿಶ್ವವನ್ನೇ ಪ್ರೀತಿಸುವಂತಹ ಹೃದಯ ವೈಶಾಲ್ಯತೆ ಹೊಂದಿದಂತಹವರು. ಬಸವಣ್ಣನವರ ತತ್ವಗಳು ಅಂದಿಗೂ ಬೇಕು, ಇಂದಿಗೂ ಬೇಕು. ಎಂದೆಂದಿಗೂ ಬೇಕು, ಎಲ್ಲರಿಗೂ ಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಜೀವಿಯಾಗಿ ಸಾರ್ಥಕ ಬದುಕು ನಡೆಸಲು ಬೇಕಾದ ವಿಚಾರಗಳು ಬಸವಣ್ಣನವರ ವಚನದಲ್ಲಿ ಕಾಣುತ್ತಿದ್ದೇವೆ. ಇವತ್ತು ಮಠಗಳು ಸಾಮಾಜಿಕ ಸೇವೆ ಮಾಡುತ್ತಿದ್ದೇವೆ ಅಂದರೆ ಅದಕ್ಕೆಲ್ಲ ಮೂಲ ಕಾರಣನೇ 12ನೇ ಶತಮಾನದಲ್ಲಿ ಬಸವಣ್ಣನವರ ಕೊಟ್ಟಂತಹ ಕೊಡುಗೆ, ಕಾಯಕ, ಸೇವೆ, ದಾಸೋಹ, ಸಮಾನತೆ, ಸ್ವಾತಂತ್ರ‍್ಯ.
ಸಂಪತ್ತಿನ ನ್ಯಾಯವಾದ ಹಂಚಿಕೆಯಾಗಬೇಕಾದರೆ ದಾಸೋಹದ ತತ್ವ ಬೇಕಾಗಿದೆ. ಪುರುಷ ಮತ್ತು ಮಹಿಳೆಯರ ಸಮಾನತೆಗೆ ಬಸವಣ್ಣನವರ ಚಿಂತನೆ ಬೇಕಾಗಿದೆ. ಸಾಮಾಜಿಕ, ಸೌಹಾರ್ದತೆ ಬೇಕಾದರೆ ಶರಣರ ಮಾನವೀಯ ಸಂದೇಶಗಳು ಬೇಕಾಗಿದೆ. ಸಮಾನತೆ ಬೇಕಾದರೆ ಬಸವಣ್ಣನವರ ತತ್ವ ಬೇಕಾಗಿದೆ. ಇಂತಹ ಸಂದೇಶಗಳನ್ನು ಜಗತ್ತಿಗೆ ಕೊಟ್ಟು, ಅವರ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿ, ಇಂದಿಗೂ ಕೂಡ ಪೂಜ್ಯ ಹಾಗೂ ಸ್ಮರಣೀಯರಾಗಿದ್ದಾರೆ.
Laxmi News 24×7