ಮುಂಬೈ: 14ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ದಿಶಾ ಸಲಿಯನ್ ಸಾವನ್ನಪ್ಪಿದ ಯುವತಿ. ಬಾಲಿವುಡ್ ಸೆಲೆಬ್ರಿಟಿಗಳಾದ ಸುಶಾಂತ್ ಸಿಂಗ್ ರಜಪೂತ್, ಭಾರತಿ, ವರುಣ್ ಶರ್ಮಾ ಸೇರಿದಂತೆ ಹಲವರ ಮ್ಯಾನೇಜರ್ ಆಗಿ ದಿಶಾ ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಕಟ್ಟಡ ಮೇಲಿಂದ ಬಿದ್ದಿರೋ ದಿಶಾರನ್ನು ಕೂಡಲೇ ಸ್ಥಳೀಯರು ಬೋರಿವಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ದಿಶಾ ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ.
ದಿಶಾ ತನ್ನ ಗೆಳೆಯನ ಜೊತೆ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಿಶಾ ಪೋಷಕರು, ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜೊತೆಯಲ್ಲಿ ವಾಸವಾಗಿದ್ದ ಗೆಳೆಯನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ.
ಈ ಕುರಿತು ಮಾಹಿತಿ ನೀಡಿರುವ ಮುಂಬೈ ಪೊಲೀಸರು, ಘಟನೆಗೂ ಮುನ್ನ ದಿಶಾ ಗೆಳೆಯ ಸೇರಿದಂತೆ ನಾಲ್ಕೈದು ಜನರ ಜೊತೆ ರಾತ್ರಿಯ ಊಟ ಮಾಡಿದ್ದರು. ಊಟದ ನಂತರ ಏನಾಯ್ತು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಬಂಟಿ ಸಜ್ದೇಹ ಮ್ಯಾನೇಜಮೆಂಟ್ ಕಂಪನಿಯಲ್ಲಿ ದಿಶಾ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ದಿಶಾ ಸಾವಿಗೆ ಸಂತಾಪ ಸೂಚಿಸಿರುವ ನಟ ವರುಣ್ ಶರ್ಮಾ, ಇನ್‍ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಳ್ಳೆಯ ಗೆಳೆತಿಯನ್ನು ಇಂದು ನಾನು ಕಳೆದುಕೊಂಡಿದ್ದೇನೆ. ಈಗಲೂ ದಿಶಾ ಸಾವನ್ನು ನಂಬಲು ಆಗ್ತಿಲ್ಲ ಎಂದು ಸಂತಾಪ ಸೂಚಿಸಿದ್ದಾರೆ.