ಲಕ್ನೋ: ಕೊರೊನಾ ವೈರಸ್ ಮಹಾಮಾರಿ ಭಾರತಕ್ಕೆ ಒಕ್ಕರಿಸುತ್ತಿದ್ದಂತೆಯೇ ದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರಿಗೆ ದಾನಿಗಳು ಸಹಾಯ ಮಾಡಿ ಮಾನೀವಯತೆ ಮೆರೆದಿದ್ದಾರೆ. ಅನೇಕ ಸಮಾರಂಭಗಳು ಕೂಡ ಲಾಕ್ ಡೌನ್ ಪರಿಣಾಮ ರದ್ದಾವು. ಹಾಗೆಯೇ ಉತ್ತರಪ್ರದೇಶದ ಬರೇಲಿಯಲ್ಲಿ ಆರತಕ್ಷತೆ ಸಮಾರಂಭವೊಂದು ಕ್ಯಾನ್ಸಲ್ ಆದ ಪರಿಣಾಮ ಜೋಡಿ ಆಹಾರ ಕಿಟ್ ಗಳನ್ನು ನೀಡುವ ಮೂಲಕ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.
ಹೌದು. ಜೋಡಿ ಮಾರ್ಚ್ 30ರಂದು ಮದುವೆಯಾಗಬೇಕಿದ್ದು, ಏಪ್ರಿಲ್ 1ರಂದು ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು. ಈ ಶುಭಗಳಿಗೆಗೆ ಸುಮಾರು 800 ಮಂದಿ ಸೇರುವವರಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಆರತಕ್ಷತೆ ಕ್ಯಾನ್ಸಲ್ ಆಯಿತು.
ಆರತಕ್ಷತೆ ಕ್ಯಾನ್ಸಲ್ ಆದ ಪರಿಣಾಮ ಅಮ್ರೀನ್ ಹಾಗೂ ಮುದಾಸಿರ್ ಜೋಡಿ ಶನಿವಾರ ವಧುವಿನ ಮನೆಯಲ್ಲಿ ಸರಳವಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿಸಿಕೊಂಡರು. ಹಾಗೆಯೇ ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕಿದ್ದ ಹಣದಲ್ಲಿ ಬೆವರಿಗೆ ಆಹಾರ ಕಿಟ್ ಗಳನ್ನು ನೀಡಲು ತೀರ್ಮಾನ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುದಾಸಿರ್, ನಾವು ಕಳೆದ ಎರಡು ವರ್ಷಗಳಿಂದ ಮದುವೆಯಾಗಲು ಯೋಜನೆ ಹಾಕುತ್ತಿದ್ದೆವು. ಹೇಗೋ ಈ ಬಾರಿ ಮದುವೆಯಾಗುವ ದಿನ ಕೂಡಿ ಬಂತು. ಹೀಗಾಗಿ ಸುಮಾರು 800 ಮಂದಿಯನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು. ಆದರೆ ಕೊರೊನಾ ವೈರಸ್ ಭೀತಿಯಿಂದ ಹೇರಲಾದ ಲಾಕ್ ಡೌನ್ ನಿಂದಾಗಿ ನಮ್ಮ ಪಾಲ್ ಗಳೆಲ್ಲ ಬದಲಾವಣೆಯಾಗಲು ಕಾರಣವಾಯಿತು.
ಇತ್ತ ಮುದಾಸಿರ್ ತಾಯಿಯ ಆರೋಗ್ಯ ಕೂಡ ಕ್ಷೀಣಿಸುತ್ತಿದ್ದು, ಹೀಗಾಗಿ ಮದುವೆಯನ್ನು ಸರಳವಾಗಿ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಹಾಜಿಯಾಪುರ್ ಹಾಗೂ ಬಕರ್ ಗಂಜ್ ಪ್ರದೇಶದ ಬಡವರಿಗೆ ಧಾನ್ಯಗಳು, ಎಣ್ಣೆ, ಅಕ್ಕಿ ಹಾಗೂ ಚಹಾದ ಎಲೆಗಳನ್ನು ಆಹಾರ ಕಿಟ್ ನಲ್ಲಿ ನೀಡಲಾಯಿತು. ಒಂದು ಆಹಾರ ಕಿಟ್ ಗೆ ಮುದಾಸಿರ್ ದಂಪತಿ ಸುಮಾರು 400 ರೂ. ಖರ್ಚು ಮಾಡಿದ್ದು, ಒಟ್ಟು 90 ಸಾವಿರ ರೂ. ಬಡವರಿಗಾಗಿ ಖರ್ಚು ಮಾಡಿದ್ದಾರೆ.