ಹುಕ್ಕೇರಿ: ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರ ಆರ್‌ಸಿ ಗ್ರಾಮದಲ್ಲಿರುವ ಶತಮಾನದ ಪುರಾತನ ವಿಠ್ಠಲ ದೇವಸ್ಥಾನ ಜಲಾಶಯದ ನೀರು ಕಡಿಮೆಯಾಗಿರುವುದರಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ.
1928ರಲ್ಲಿ ಈ ವಿಠ್ಠಲ ದೇವಸ್ಥಾನ ನಿರ್ಮಿಸಿದ್ದು, ಗುತ್ತಿಯ ಮಣ್ಣಿನಿಂದ ವಿಠ್ಠಲ ಮೂರ್ತಿ ತಯಾರಿಸಲಾಗಿದೆ.
ಆ ಮೂರ್ತಿಯ ಮೇಲೆ ಹೊದಿಸಿರುವ ಕಂಬಳಿ ವರ್ಷವಿಡಿ ನೀರಿನಲ್ಲಿದ್ದರೂ ಅದರಲ್ಲಿ ನೀರಿನಂಶ ಇರುವುದಿಲ್ಲ. ಹಾಗಾಗಿ ಇದೊಂದು ದೈವಿಕ ಪವಾಡ ಎನ್ನುತ್ತಾರೆ ಭಕ್ತರು. 1975-76ರಲ್ಲಿ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹದಿಂದ ಈ ದೇವಸ್ಥಾನ ಮುಳುಗಡೆಯಾಗಿದೆ. ಪ್ರತಿ ವರ್ಷ ಬೇಸಿಗೆ ಸಮಯದ ಮೇ ತಿಂಗಳಲ್ಲಿ ಮಾತ್ರ ಭಕ್ತರಿಗೆ ಈ ದೇವಸ್ಥಾನ ನೋಡಲು ಸಿಗುತ್ತದೆ. ಜಲಾಶಯದ ಹಿನ್ನೀರಿನಿಂದ ಗ್ರಾಮದ ಕೆಲ ಮನೆಗಳು ಮುಳುಗಡೆಯಾಗಿವೆ.
ಆ ಗ್ರಾಮದ ಜನರು ಜಲಾಶಯದ ಪಕ್ಕದ ಗುಡ್ಡದಲ್ಲಿ ವಾಸವಾಗಿದ್ದು, ಅಲ್ಲಿಯೇ ನೂತನ ವಿಠ್ಠಲ ದೇವಸ್ಥಾನ ನಿರ್ಮಿಸಿಕೊಂಡಿದ್ದಾರೆ. ಪ್ರತಿವರ್ಷ ಯುಗಾದಿಗೆ ಜರುಗುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎಂದು ಗ್ರಾಮಸ್ಥ ವಿಠ್ಠಲ ಪಿಸುತ್ರಿ ತಿಳಿಸಿದ್ದಾರೆ.
Laxmi News 24×7