ಬೆಂಗಳೂರು : ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ, ಮತ್ತವರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನಲ್ನಲ್ಲಿ ವಿಡಿಯೋ ಪ್ರಸಾರ ಮಾಡಿದ ಪ್ರಕರಣ ಸಂಬಂಧ ಎಂ. ಡಿ. ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣಾ ವ್ಯಾಪ್ತಿ ಕುರಿತು ಸ್ಪಷ್ಟನೆ ನೀಡಲು ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ತನ್ನ ವಿರುದ್ಧ 2025ರ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಯೂಟ್ಯೂಬರ್ ಎಂ. ಡಿ. ಸಮೀರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿಯ ವಿಚಾರಣಾ ಮಾನ್ಯತೆ ಬಗ್ಗೆ ಆಕ್ಷೇಪವಿದೆ. ಏಕೆಂದರೆ, ಎಫ್ಐಆರ್ ದಾಖಲಾಗಿದ್ದು ಬಳ್ಳಾರಿಯಲ್ಲಿ, ಅದು ಧಾರವಾಡ ಹೈಕೋರ್ಟ್ ಪೀಠದ ವಿಚಾರಣಾ ವ್ಯಾಪ್ತಿಗೆ ಬರಲಿದೆ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿ ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠದಲ್ಲಿ ಅರ್ಜಿ ಸಲ್ಲಿಸಿರುವುದನ್ನು ಸಮರ್ಥಿಸಿಕೊಂಡ ಸಮೀರ್ ಪರ ವಕೀಲರು, ಇಡೀ ಘಟನಾವಳಿಗಳು ನಡೆದದ್ದು ಬೆಂಗಳೂರಿನಲ್ಲಿ, ನೋಟಿಸ್ ಕೊಟ್ಟಿದ್ದೂ ಸಹ ಬೆಂಗಳೂರು ವಿಳಾಸದಲ್ಲಿ, ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ವಿಚಾರಣಾ ವ್ಯಾಪ್ತಿಯ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅದರಂತೆ ಬೆಂಗಳೂರು ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಲು ತಮಗೆ ಹಕ್ಕು ಇದೆ ಎಂದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿರುವ ಸುಪ್ರೀಂಕೋರ್ಟ್ ಆದೇಶ ಎರಡು ರಾಜ್ಯಗಳ ನಡುವಿನ ಪ್ರಕರಣದ್ದಾಗಿದೆ. ಆದರೆ, ಇಲ್ಲಿ ಒಂದೇ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಹಾಗಾಗಿ, ಬಳ್ಳಾರಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣಾ ವ್ಯಾಪ್ತಿ ಧಾರವಾಡ ಹೈಕೋರ್ಟ್ ಹೊಂದಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಈ ಸಂಬಂಧ ಸ್ಪಷ್ಟನೆ ನೀಡುವಂತೆ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ನಿರ್ದೇಶನ ನೀಡಿತು. ಇದೇ ವೇಳೆ ಪ್ರಕರಣವನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಅರ್ಜಿದಾರ ಹಾಗೂ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.
Laxmi News 24×7