Breaking News

ತಾನು ಭಾಷಣ ಮಾಡಿದ ಜಾಗದಲ್ಲಿ ಶುದ್ಧೀಕರಣ ಹೋಮ – ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಖರ್ಗೆ ಕಿಡಿ

Spread the love

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ನಡೆಸಿದ ಬಳಿಕ ನಡೆದ ‘ಶುದ್ಧೀಕರಣ’ ಹೋಮ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಆಗಸ್ಟ್ 8ರಂದು ಖರ್ಗೆ ರ‍್ಯಾಲಿ ನಡೆಸಿದ್ದ ಸ್ಥಳದಲ್ಲಿ ಆಗಸ್ಟ್ 10ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯಿಂದ ಶುದ್ಧೀಕರಣ ಹೋಮ ನಡೆಸಲಾಗಿತ್ತು. ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದೆ.

ಈ ವಿಷಯದ ಕುರಿತು ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಖರ್ಗೆ, ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ನಾವು ಹೇಳುತ್ತಲೇ ಇದ್ದೇವೆ. ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ವಿಭಜಿಸಲಾಗುತ್ತಿದೆ. ಅಲ್ಲಿ ಹವನ ಮಾಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ತಮ್ಮ ಭಾಷಣದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿಲ್ಲ. ಸರ್ಕಾರದ ಸಮಸ್ಯೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೇನೆ. ಅನು ತಮ್ಮ ರ‍್ಯಾಲಿ ನಡೆಸಿದ ಸ್ಥಳವನ್ನು ಶುದ್ಧೀಕರಿಸಲು ಹೋಮ ಮಾಡಲಾಗಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರ‍್ಯಾಲಿ ನಡೆದ ಸ್ಥಳವನ್ನು ಶುದ್ಧೀಕರಿಸುವ ಹೆಸರಿನಲ್ಲಿ ಹೋಮ ನಡೆಸಿರುವುದು ಹಿಂದೂ ಧರ್ಮದ ವಿರುದ್ಧ, ಇದೇ ಮುಂದೆ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದೇ ವೇಳೆ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಹೋಮ ನಡೆಸಿದ ಶ್ರೀರಾಮ ಸೇನಾ ಸಂಘಟನೆಗೆ ಬಿಜೆಪಿಯೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.

ಈ ವಿಚಾರಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಜೆ.ಪಿ. ನಡ್ಡಾ, ಖರ್ಗೆ ಬಗ್ಗೆ ಗೌರವವಿದೆ ಮತ್ತು ನಡೆದ ಶುದ್ಧೀಕರಣ ಕಾರ್ಯಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಹೋಮ ನಡೆಸಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಆಗಸ್ಟ್ 10ರಂದು ಶುದ್ಧೀಕರಣ ಹೋಮ ನಡೆಸಿದ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯ ಪದಾಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಾಮಲೀಲಾ ಮೈದಾನವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುವ ಸ್ಥಳವಾಗಿದ್ದು, ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಮೈದಾನ ನೀಡಬಾರದು ಎಂದು ಅವರು ಹೇಳಿದ್ದಾರೆ.

ಖರ್ಗೆ ಅವರ ರ‍್ಯಾಲಿಯಲ್ಲಿ ಸನಾತನ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಘೋಷಣೆಗಳು ಕೇಳಿಬಂದಿದ್ದವು ಎಂಬ ಆರೋಪವನ್ನೂ ಬಿಜೆಪಿ ಮಾಡಿದೆ. ಆದರೆ ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದೆ. ಹೀಗಾಗಿ ಖರ್ಗೆ ರ‍್ಯಾಲಿ ಬಳಿಕ ನಡೆದ ಈ ‘ಶುದ್ಧೀಕರಣ’ ಕಾರ್ಯಕ್ರಮ ಇದೀಗ ಉತ್ತರಾಖಂಡದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ವಾಲ್ಮೀಕಿ ಸಮಾಜದ ಬಗ್ಗೆ ಗೌರವವಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡಲಿ: ವಿಜಯೇಂದ್ರ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಹಾಗೂ ಸಚಿವ ಬಿ. ನಾಗೇಂದ್ರ  ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ