ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಆರೋಪ ಪ್ರಕರಣವೊಂದರಲ್ಲಿ ಅಮೆರಿಕದ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಖ್ಯ ವಿಚಾರಣೆಯಲ್ಲಿ ತನ್ನ ಹೇಳಿಕೆ ದಾಖಲಿಸಲು ಮತ್ತು ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ಮಹಿಳೆಯೊಬ್ಬರಿಗೆ ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ ಅಧಿನಿಯಮಗಳು-2020ರ ನಿಯಮ 5.3.1 ಸಡಿಲಿಸಿ ಅಮೆರಿಕದ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಹಾಜರಾಗಲು ತನಗೆ ಅನುಮತಿ ನೀಡುವಂತೆ ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿವ ಶಂಕರ್ ಮಗದಮ್ ಅವರ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರು ಅಮೆರಿಕ ಮತ್ತು ಭಾರತದ ಸಮಯ ವ್ಯತ್ಯಾಸವಿದೆ. ಭಾರತೀಯ ನ್ಯಾಯಾಲಯಗಳು ಮತ್ತು ಅಮೆರಿಕದ ರಾಯಭಾರಿ ಕಚೇರಿಯ ಕಾರ್ಯನಿರ್ವಹಣಾ ಸಮಯ ಹೊಂದಾಣಿಕೆಯಾಗುವುದಿಲ್ಲ. ಇದರಿಂದ ಭಾರತದ ಕೋರ್ಟ್ನ ವಿಚಾರಣೆಗೆ ಅಮೆರಿಕ ರಾಯಭಾರಿ/ಕಾನ್ಸುಲೇಟ್ ಕಚೇರಿಯ ಮೂಲಕ ಹಾಜರಾಗಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇದರಿಂದ ರಾಯಭಾರಿ ಕಚೇರಿ ಮೂಲಕವೇ ಕೋರ್ಟ್ ಪ್ರಕ್ರಿಯೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಒತ್ತಾಯಿಸುವುದರಿಂದ ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟಾಗಲಿದೆ. ಜೊತೆಗೆ, ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಸಹ ಕಾರಣವಾಗುತ್ತದೆ. ಇದರಿಂದ ಅಮೆರಿಕದ ತನ್ನ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಅರ್ಜಿದಾರೆ ಹಾಜರಾಗಬಹುದು ಎಂದು ಪೀಠ ಹೇಳಿದೆ.
ಅಲ್ಲದೇ, ವಿಚಾರಣೆಯ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಳಿಸುವುದಿಲ್ಲ ಅಥವಾ ಹಠಾತ್ ಕೊನೆಗೊಳಿಸುವುದಿಲ್ಲ ಎಂಬುದಾಗಿ ದೃಢೀಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿದಾರೆಯು ಮುಚ್ಚಳಿಕೆ ನೀಡಬೇಕು. ಅರ್ಜಿದಾರೆಯು ತನ್ನ ಮುಚ್ಚಳಿಕೆಯನ್ನು ಉಲ್ಲಂಘಿಸಿದರೆ ಸಂಪೂರ್ಣ ಸಾಕ್ಷ್ಯವನ್ನು ತಿರಸ್ಕರಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Laxmi News 24×7