Breaking News

ಸೌಜನ್ಯ ರೇಪ್ & ಮರ್ಡರ್ ಕೇಸ್ – ಸುಪ್ರೀಂ ಕೋರ್ಟ್‌ನಲ್ಲಿ ಸಂತೋಷ್ ರಾವ್‌ಗೆ ಹಿನ್ನಡೆ

Spread the love

ನವದೆಹಲಿ: ಧರ್ಮಸ್ಥಳದಲ್ಲಿ  ಗ್ರಾಮ ಸಮೀಪದ ಪಾಂಗಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್‌ ರಾವ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ  ಮತ್ತೆ ಹಿನ್ನಡೆಯಾಗಿದೆ.

ಪರಿಹಾರ ಧನಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್‌ನ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ವಜಾಗೊಳಿಸಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕುಮಾರ್ ಹಾಗೂ ನ್ಯಾ. ಸಂಜೀವ್ ಸಚ್‌ದೇವ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣಗಳು ಕಂಡುಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿ ವಿಶೇಷ ಅನುಮತಿ ಅರ್ಜಿಯನ್ನ ವಜಾಗೊಳಿಸಿತು. ಇದೇ ವೇಳೆ, ಸಂತೋಷ್ ರಾವ್ ಅವರು ಪರಿಹಾರ ಧನಕ್ಕೆ ಅರ್ಹರು ಎಂದು ಭಾವಿಸಿದರೆ, ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟ ಕೆಳ ಹಂತದ ನ್ಯಾಯಾಲಯ ಅಥವಾ ಸೂಕ್ತ ವೇದಿಕೆಯ ಮುಂದೆ ಸ್ವತಂತ್ರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಅರ್ಜಿಯಲ್ಲಿದ್ದ ವಿಳಂಬವನ್ನು ಸುಪ್ರೀಂ ಕೋರ್ಟ್ ಮೊದಲು ಕ್ಷಮಿಸಿತು. ಆದರೆ, ಪ್ರಕರಣದ ಮೂಲ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನು ಬದಲಾಯಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ಅಂತಿಮವಾಗಿ ವಜಾಗೊಳಿಸಿತು.

ಏನಿದು ಪ್ರಕರಣ?
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು ಎಂದು ತಂದೆ ಚಂದ್ರಪ್ಪ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು.

ಮೊದಲು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನ ಸಿಐಡಿಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಸರ್ಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.

11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ವಿಶೇಷ ಕೋರ್ಟ್ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಸಿಬಿಐ ಅಧಿಕಾರಿಗಳು ಸಂತೋಷ್ ರಾವ್ ವಿರುದ್ಧದ ಆರೋಪ ಸಾಬೀತು ಪಡಿಸಲು ವಿಫಲ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಸಂತೋಷ್ ರಾವ್ ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು.


Spread the love

About Laxminews 24x7

Check Also

ವಾಲ್ಮೀಕಿ ಸಮಾಜದ ಬಗ್ಗೆ ಗೌರವವಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡಲಿ: ವಿಜಯೇಂದ್ರ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಹಾಗೂ ಸಚಿವ ಬಿ. ನಾಗೇಂದ್ರ  ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ