ಬೆಂಗಳೂರು: ನಗರದ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿದೆ. ಪುಗ್ಸಟ್ಟೆ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್ ಹಾಕಲು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಹೊಸ ನೀತಿಯಡಿ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಾಹನಗಳಿಗೆ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಹಲವು ರಸ್ತೆಗಳಲ್ಲಿ ಸಂಪೂರ್ಣ ನಿರ್ಬಂಧ
ಹೊಸ ಪಾರ್ಕಿಂಗ್ ನಿಯಮದಡಿ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಸಂಪೂರ್ಣ ನಿರ್ಬಂಧ ವಿಧಿಸಲು ಉದ್ದೇಶಿಸಲಾಗಿದೆ. ಮೆಟ್ರೋ ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತ, ಆರ್ಟಿರಿಯಲ್ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗುತ್ತದೆ. ಸಿಗ್ನಲ್‌ಗಳಿಂದ 50 ಮೀಟರ್ ಅಂತರದವರೆಗೆ ಹಾಗೂ ಉಪಮುಖ್ಯ ರಸ್ತೆಗಳಿಂದ 25 ಮೀಟರ್ ವ್ಯಾಪ್ತಿಯಲ್ಲೂ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
ಆಫ್‌ಸ್ಟ್ರೀಟ್ ಪಾರ್ಕಿಂಗ್ ಬಳಸುವವರಿಗೆ ಮಾಸಿಕ ಪಾಸ್
ಇದರ ನಡುವೆ ರಾತ್ರಿ ವೇಳೆ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ. ಆಫ್-ಸ್ಟ್ರೀಟ್ ಪಾರ್ಕಿಂಗ್ ಬಳಸುವವರಿಗೆ ಮಾಸಿಕ ಪಾಸ್ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದೆ. ಆದರೆ ಬೈಸಿಕಲ್‌ಗಳ ನಿಲುಗಡೆಗೆ ಹಾಗೂ ಆಟೋ ನಿಲ್ದಾಣಗಳಲ್ಲಿ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ.
ಯಾರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ?
ನಗರದಲ್ಲಿ ಹೆಚ್ಚಿನ ಪಾರ್ಕಿಂಗ್ ಸ್ಥಳಗಳನ್ನು ಸೃಷ್ಟಿಸಲು ಸರ್ಕಾರಿ ನಿಗಮಗಳ ಜಾಗ ಬಳಸುವ ಯೋಜನೆಯೂ ಇದೆ. ಸಂಬಂಧಿಸಿದ ನಿಗಮಗಳಿಂದ ಅನುಮತಿ ಪಡೆದು ಸರ್ಕಾರಿ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಖಾಲಿ ನಿವೇಶನಗಳನ್ನ ಪಾರ್ಕಿಂಗ್ ಸ್ಥಳವಾಗಿ ಬಳಸಲು ನೀಡುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ.
ಬಾಡಿಗೆದಾರರ ಪಾರ್ಕಿಂಗ್ ಶುಲ್ಕ ಮಾಲೀಕರೇ ಭರಿಸಬೇಕು
ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ವಾಹನ ನಿಲುಗಡೆಗೆ ಅಗತ್ಯವಾದ ಜಾಗ ಕಲ್ಪಿಸಿಕೊಡಬೇಕು ಎಂಬ ನಿಯಮವನ್ನೂ ತರಲು ಉದ್ದೇಶಿಸಲಾಗಿದೆ. ಬಾಡಿಗೆದಾರರಿಗೆ ಪಾರ್ಕಿಂಗ್ ಜಾಗ ಒದಗಿಸದಿದ್ದರೆ ಮನೆ ಮಾಲೀಕರಿಗೆ ದಂಡ ವಿಧಿಸುವ ಪ್ರಸ್ತಾವನೆ ಇದೆ. ಮನೆ ಮುಂದೆ ವಾಹನಗಳನ್ನು ನಿಲುಗಡೆ ಮಾಡುವ ಸಂದರ್ಭದಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸುವ ಜವಾಬ್ದಾರಿಯನ್ನೂ ಮಾಲೀಕರ ಮೇಲೆ ಹಾಕುವ ಕುರಿತು ನಿಯಮ ರೂಪಿಸಲಾಗುತ್ತಿದೆ.
ಒಟ್ಟಿನಲ್ಲಿ, ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಿ (GBA) ಹೊಸ ನೀತಿ ರೂಪಿಸುತ್ತಿದೆ. ರಸ್ತೆ ಆಧಾರಿತ ಪಾರ್ಕಿಂಗ್ ಶುಲ್ಕ, ನಿಷೇಧಿತ ಪ್ರದೇಶಗಳು, ಮಾಸಿಕ ಪಾಸ್, ರಾತ್ರಿ ಪಾರ್ಕಿಂಗ್ ಹಾಗೂ ಖಾಲಿ ನಿವೇಶನಗಳನ್ನು ಪಾರ್ಕಿಂಗ್‌ಗೆ ಬಳಸುವ ಯೋಜನೆ ಸೇರಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಯಾವ್ಯಾವ ವಾಹನಗಳಿಗೆ ಎಷ್ಟೆಷ್ಟು ಪಾರ್ಕಿಂಗ್ ಶುಲ್ಕ? ಯಾವ ಪ್ರದೇಶಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ? ಹೊಸ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ? ಎಂಬುದರ ಸಂಪೂರ್ಣ ವಿವರ ʻಪಬ್ಲಿಕ್ ಟಿವಿʼಯ ವರದಿಯಲ್ಲಿದೆ.
1. ಮಿನಿಮಮ್ ಆನ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ?
( ಪ್ರತಿ ಗಂಟೆಗೆ ನಿಗದಿಪಡಿಸಲಾದ ಶುಲ್ಕ)
* ಸಿ. ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 20 ರೂ.
ಲಘುವಾಹನಗಳು – 60-40 ರೂ.
* ಬಿ ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 30 ರೂ.
ಲಘುವಾಹನಗಳು – 60 ರೂ.
* ಎ ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 40 ರೂ.
ಲಘುವಾಹನಗಳು – 80 ರೂ.
2. ಮಿನಿಮಮ್ ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ?
* ಸಿ ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 10 ರೂ.
ಲಘುವಾಹನಗಳು – 20 ರೂ.
* ಬಿ ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 15 ರೂ.
ಲಘುವಾಹನಗಳು – 30 ರೂ.
* ಎ ಕ್ಯಾಟಗಿರಿ ರಸ್ತೆ ಪಾರ್ಕಿಂಗ್ ದರ
ದ್ವಿಚಕ್ರ ವಾಹನ – 20 ರೂ.
ಲಘುವಾಹನಗಳು – 40 ರೂ.
3. ಮಾಸಿಕ ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ?
* ಸಿ ಕ್ಯಾಟಗಿರಿ ರಸ್ತೆ ಮಾಸಿಕ ಪಾಸ್
ದ್ವಿಚಕ್ರ ವಾಹನ – 1,000 ರೂ. ಮಾಸಿಕ ಪಾಸ್
ಲಘುವಾಹನಗಳು 2000 ರೂ. ಮಾಸಿಕ ಪಾಸ್
* ಬಿ ಕ್ಯಾಟಗಿರಿ ರಸ್ತೆ ಮಾಸಿಕ ಪಾಸ್ ದರ
ದ್ವಿಚಕ್ರ ವಾಹನ – 1,500 ರೂ.
ಲಘುವಾಹನಗಳು – 3,000 ರೂ.
* ಎ ಕ್ಯಾಟಗಿರಿ ರಸ್ತೆ ಮಾಸಿಕ ಪಾಸ್ ದರ
ದ್ವಿಚಕ್ರ ವಾಹನ – 2,000 ರೂ.
ಲಘುವಾಹನಗಳು – 40,000 ರೂ.
Laxmi News 24×7