Breaking News

ಹಾವೇರಿಯಲ್ಲಿ 14 ಗಂಟೆಗಳ ಮ್ಯಾರಥಾನ್ ಸಭೆ ಯಶಸ್ವಿ – ಪ್ರತಿಟನ್ ಕಬ್ಬಿಗೆ 3,225 ದರ ನಿಗದಿ

Spread the love

ಹಾವೇರಿ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಾವೇರಿ  ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸತತ 14 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯ ಬಳಿಕ, ಪ್ರತಿ ಟನ್ ಕಬ್ಬಿಗೆ 3,225 ರೂಪಾಯಿ ದರ ನೀಡಲು ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.

12 ಗಂಟೆಗೆ ಆರಂಭವಾದ ಸಭೆ ಮಂಗಳವಾರ ನಸುಕಿನ ಜಾವ 2 ಗಂಟೆಯವರೆಗೂ ನಡೆಯಿತು. ಆರಂಭದಲ್ಲಿ ರೈತರು ಪ್ರತಿ ಟನ್‌ಗೆ 3,500 ರಿಂದ 3,600 ರೂ. ದರಕ್ಕೆ ಪಟ್ಟು ಹಿಡಿದಿದ್ದರು. ಆದರೆ, ಕಾರ್ಖಾನೆ ಮಾಲೀಕರು 3,100 ರೂ.ಗಿಂತ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದಾಗ ಆಕ್ರೋಶಗೊಂಡ ನೂರಾರು ರೈತರು ಡಿಸಿ ಕಚೇರಿಗೆ ನುಗ್ಗಿದರು.

ಕಚೇರಿಯ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ, ಸಭೆ ಮುಗಿಯುವವರೆಗೂ ಸಚಿವರು, ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲೀಕರು ಹೊರಹೋಗದಂತೆ ತಡೆದಿದ್ದರು. ಬೆಳಗಾವಿ ಭಾಗದಲ್ಲಿ ಕಬ್ಬಿನ ರಿಕವರಿ ಶೇ.11 ಕ್ಕಿಂತ ಹೆಚ್ಚಿರುವುದರಿಂದ ಅಲ್ಲಿ 3,600 ರೂ.ಗಿಂತಲೂ ಹೆಚ್ಚು ದರ ನೀಡಲಾಗುತ್ತಿದೆ. ಆದರೆ ಹಾವೇರಿಯಲ್ಲಿ ರಿಕವರಿ ಕೇವಲ ಶೇ.9.44 ಇದೆ ಎಂದು ಕಾರ್ಖಾನೆ ಮಾಲೀಕರು ವಾದಿಸಿದರು.

ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಹಾಗೂ ಎಸ್‌ಪಿ ಯಶೋಧಾ ವಂಟಗೋಡಿ ಅವರ ನೇತೃತ್ವದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದ್ದು. ರೈತರು ಕನಿಷ್ಠ 3,300 ಕ್ಕೆ ಪಟ್ಟು ಹಿಡಿದರೂ, ಸಚಿವರ ಮನವಿ ಮತ್ತು ರೈತರ ಸಂಕಷ್ಟದ ಹಿನ್ನೆಲೆ ಅಂತಿಮವಾಗಿ 3,225 ದರವನ್ನು ನಿಗದಿಪಡಿಸಿ ಘೋಷಣೆ ಮಾಡಿದರು. ನಂತರ ಮಾತನಾಡಿದ ರೈತ ಮುಖಂಡ ಚುನಪ್ಪ ಪೂಜೇರಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾವೇರಿಯಲ್ಲಿ ರಿಕವರಿ ಕಡಿಮೆ ಇದೆ ಎಂದು ವಾದಿಸಿ 3,100 ಕ್ಕೆ ಪಟ್ಟು ಹಿಡಿದಿದ್ದರು. ಆದರೆ ಸಚಿವ ರುದ್ರಪ್ಪ ಲಮಾಣಿ ಅವರು ಕೈಮುಗಿದು ಕೇಳಿಕೊಂಡಿದ್ದರಿಂದ ಮತ್ತು ಬೆಳಿಗ್ಗೆಯಿಂದ ರೈತರು ಹೈರಾಣಾಗಿದ್ದರಿಂದ ಅನಿವಾರ್ಯವಾಗಿ 3,225 ದರಕ್ಕೆ ತಾತ್ಕಾಲಿಕ ಒಪ್ಪಿಗೆ ನೀಡಿದ್ದೇವೆ ಎಂದರು.

ಸದ್ಯಕ್ಕೆ ಚಳುವಳಿ ಹಿಂಪಡೆದಿದ್ದೇವೆ. ಆದರೆ, ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸ ತಡೆಯಬೇಕು ಹಾಗೂ ನಿಖರವಾದ ರಿಕವರಿ ಪರೀಕ್ಷೆಗಾಗಿ ಪ್ರತ್ಯೇಕ ಲ್ಯಾಬ್ ಸ್ಥಾಪಿಸಲು 500 ಕೋಟಿ ಮೀಸಲಿಡಬೇಕು. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಸಚಿವರ ಕ್ಷೇತ್ರದಲ್ಲಿ ರೈತರಿಗೆ ಸರಿಯಾದ ದರ ಕೊಡಿಸಲು ಆಗುತ್ತಿಲ್ಲ ಎಂಬ ರೈತರ ಆಕ್ರೋಶವಿತ್ತು. ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಅವರು ಹೆಚ್ಚಿನ ದರ ಕೇಳುವುದರಲ್ಲಿ ತಪ್ಪಿಲ್ಲ. 14 ತಾಸುಗಳ ಸಭೆಯ ಬಳಿಕ ರಿಕವರಿ ಆಧಾರದ ಮೇಲೆ ಮೂರೂ ಕಾರ್ಖಾನೆಗಳು 3,225 ನೀಡಲು ಒಪ್ಪಿವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರತ್ಯೇಕ ರಿಕವರಿ ಲ್ಯಾಬ್ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.


Spread the love

About Laxminews 24x7

Check Also

ಜೈಲಿನಲ್ಲೂ ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆ ಕಳ್ಳಾಟ

Spread the loveಗಳೂರು: ಕೆಪಿಎಸ್‌ಸಿ  ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ  ತನ್ನ ಕಳ್ಳಾಟವನ್ನು ಜೈಲಿನಲ್ಲಿಯೂ ಮುಂದುವರಿಸಿದ್ದಾನೆ ಎನ್ನೋದು ಬಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ