Breaking News

ದೆಹಲಿಯಲ್ಲಿ ಹೈ ಅಲರ್ಟ್- 45 ಮೆಟ್ರೋ ನಿಲ್ದಾಣಗಳು ಬಂದ್, ಜಂತರ್ ಮಂತರ್‌ನಲ್ಲಿ 7 ಹಂತದ ಬ್ಯಾರಿಕೇಡ್

Spread the love

ನವದೆಹಲಿ: ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ನವದೆಹಲಿ ವ್ಯಾಪ್ತಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಕಣ್ಗಾವಲು ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸಲು (ಆಡಿಯೋ ರೆಕಾರ್ಡಿಂಗ್ ಸಾಮರ್ಥ್ಯವಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ರಾಜೀವ್ ಚೌಕ್, ಕೇಂದ್ರ ಸಚಿವಾಲಯ, ಪಟೇಲ್ ಚೌಕ್, ಜನ್‌ಪಥ್, ನವದೆಹಲಿ, ಮಂಡಿ ಹೌಸ್, ಐಟಿಒ, ಸುಪ್ರೀಂ ಕೋರ್ಟ್ ಹಾಗೂ ಕಾಶ್ಮೀರಿ ಗೇಟ್ ಸೇರಿದಂತೆ ಒಟ್ಟು 45 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧ ನಿನ್ನೆ ರಾತ್ರಿ 9 ಗಂಟೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಜಾರಿಯಲ್ಲಿರಲಿದೆ.

ದೆಹಲಿ ಹಾಗೂ ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಆಗಮಿಸುವ 28 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಂಜಾನೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದ್ದು, ಪ್ರಮುಖ 7 ನಿಲ್ದಾಣಗಳಲ್ಲಿ 120 ಮಹಿಳಾ ಸಿಬ್ಬಂದಿ ಸೇರಿದಂತೆ 334 ರೈಲ್ವೆ ಪೊಲೀಸರನ್ನು ನಿಯೋಜಿಸಲಾಗಿದೆ. ಗುರುವಾರ ನಡೆದ ಪ್ರತಿಭಟನೆಗಳ ಕಾರಣ ಉಂಟಾದ ಟ್ರಾಫಿಕ್ ಜಾಮ್‌ನಿಂದ 5,000ಕ್ಕೂ ಹೆಚ್ಚು ಪ್ರಯಾಣಿಕರು ರೈಲು ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ  ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ದೆಹಲಿ ಪೊಲೀಸರು ಸ್ಪಷ್ಟವಾಗಿ ಅನುಮತಿ ನಿರಾಕರಿಸಿದ್ದಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಜಧಾನಿಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತರಾದ ನೂಪುರ್ ಪ್ರಸಾದ್, ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮುಂಚಿತವಾಗಿ ಅನುಮತಿ ಕೋರಬೇಕಿತ್ತು. ಆದರೆ ಸಿಜೆಪಿಯ ಸೌರಭ್ ದಾಸ್ ಅವರು ಅಕ್ಟೋಬರ್ 7 ರಂದು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಈ ಹಿಂದೆ ನಡೆದ ಪ್ರತಿಭಟನೆಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗಿರುವ ಕಾರಣ ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣದ ಹಿತದೃಷ್ಟಿಯಿಂದ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಂತರ್ ಮಂತರ್ ಸುತ್ತಮುತ್ತಲಿನ 4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವದಂತಿಗಳು ಹರಡದಂತೆ ತಡೆಯಲು ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ರಾತ್ರಿ 10 ಗಂಟೆಯವರೆಗೆ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಉತ್ತರ ಪ್ರದೇಶ, ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರತಿಭಟನಾಕಾರರನ್ನು ಗಡಿಭಾಗದಲ್ಲೇ ವಶಕ್ಕೆ ಪಡೆಯಲಾಗುತ್ತಿದೆ. ನಗರದಾದ್ಯಂತ ಹೋಟೆಲ್‌ಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಪೊಲೀಸರು ತಪಾಸಣೆ ಕೈಗೊಂಡಿದ್ದು, 37 ಕಡೆ ಬ್ಯಾರಿಕೇಡ್‌ಗಳು ಮತ್ತು 15 ತಾತ್ಕಾಲಿಕ ಬಂಧನ ಕೇಂದ್ರಗಳನ್ನು ತೆರೆಯಲಾಗಿದೆ.

ಸುರಕ್ಷತೆಗಾಗಿ 23,000 ದೆಹಲಿ ಪೊಲೀಸರೊಂದಿಗೆ ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಿಂದ 7,000 ಸಿಆರ್‌ಪಿಎಫ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ನಂಬದಂತೆ ಹಾಗೂ ಮಕ್ಕಳನ್ನು ಪ್ರತಿಭಟನೆಗೆ ಕಳುಹಿಸದಂತೆ ಮಸೀದಿಗಳ ಮೈಕ್‌ಗಳ ಮೂಲಕವೂ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಕಣ್ಗಾವಲು ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸಲು ಧ್ವನಿ ಮುದ್ರಣ (ಆಡಿಯೋ ರೆಕಾರ್ಡಿಂಗ್) ಸಾಮರ್ಥ್ಯವಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

7 ಹಂತದ ಬ್ಯಾರಿಕೇಡ್‌
ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ಕನಿಷ್ಠ ಏಳು ಹಂತಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿಭಟನಾಕಾರರು ಭೇದಿಸುವುದನ್ನು ತಡೆಯಲು ಕೊನೆಯ ಹಂತದ ಕೆಲವು ಬ್ಯಾರಿಕೇಡ್‌ಗಳನ್ನು ಪರಸ್ಪರ ವೆಲ್ಡ್ ಹಾಕಲಾಗಿದೆ.

 

ಸೂಕ್ಷ್ಮ ಪ್ರದೇಶಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂಬ ಮುದ್ರಿತ ಧ್ವನಿ ಸಂದೇಶಗಳನ್ನು ನಿರಂತರವಾಗಿ ಪ್ರಸಾರ ಮಾಡಲಾಗುತ್ತಿದೆ. ಯಾರೂ ಜಮಾಯಿಸಬಾರದು, ಘೋಷಣೆ ಕೂಗಬಾರದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು ಅಥವಾ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಬಾರದು ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಜತೆಗೆ, ಪ್ರತಿಭಟನೆಗೆ ಅನುಮತಿ ಇಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಸಮುದಾಯ ಭವನಗಳು, ಮಸೀದಿಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೂ ಮನವಿ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸುವವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಹೋಟೆಲ್, ಲಾಡ್ಜ್‌ಗಳ ಮೇಲೆ ಹದ್ದಿನ ಕಣ್ಣು
ನವದೆಹಲಿ ಮತ್ತು ಮಧ್ಯ ದೆಹಲಿಯಾದ್ಯಂತ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ತಮ್ಮ ಅತಿಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲು ಹೋಟೆಲ್ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ. ಇದಲ್ಲದೆ, ಪ್ರತಿಭಟನಾಕಾರರಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡದಂತೆ ಮನೆ ಮಾಲೀಕರಿಗೂ ತಾಕೀತು ಮಾಡಲಾಗಿದೆ. ಯಾರಾದರೂ ಪ್ರತಿಭಟನೆಯಲ್ಲಿ ಭಾಗವಹಿಸುವ ಶಂಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಬಾಡಿ ಕ್ಯಾಮೆರಾ
ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಹಾಗೂ ಮಹಿಳಾ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಇಡೀ ಪರಿಸ್ಥಿತಿಯನ್ನು ಪಾರದರ್ಶಕವಾಗಿ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ಕಮಿಷನರ್ ಶ್ರೇಣಿಯ ಹಿರಿಯ ಅಧಿಕಾರಿಗಳು ಸೇರಿದಂತೆ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ನೀಡಲಾಗಿದೆ. ನೈಜ ಸಮಯದಲ್ಲಿ ಪ್ರತಿಭಟನೆ ಮತ್ತು ಪೊಲೀಸರ ಕ್ರಮಗಳನ್ನು ರೆಕಾರ್ಡ್ ಮಾಡಲು ನೂರಾರು ಫೋಟೋಗ್ರಾಫರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ತನಿಖೆಗೆ ನೆರವಾಗಲು ಮತ್ತು ತಪ್ಪು ಮಾಹಿತಿಗಳನ್ನು ಸಾಕ್ಷ್ಯ ಸಮೇತ ತಳ್ಳಿಹಾಕಲು ಈ ದೃಶ್ಯಾವಳಿಗಳು ನೆರವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ಬಹಿರಂಗ ಪತ್ರ
ದೆಹಲಿ ಪೊಲೀಸರು ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, “ಪೊಲೀಸ್ ಸಿಬ್ಬಂದಿಯೂ ಮನುಷ್ಯರೇ, ಅವರ ಮನೆಗಳಲ್ಲೂ ಅವರಿಗಾಗಿ ಕಾಯುವ ಕುಟುಂಬಗಳಿವೆ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ವ್ಯಕ್ತಿಯ ಮಾನವೀಯತೆ ಇಲ್ಲವಾಗುವುದಿಲ್ಲ” ಎಂದು ತಿಳಿಸಿದ್ದಾರೆ. ಉಭಯ ಕಡೆಯಿಂದಲೂ ಸಂಯಮ ಮತ್ತು ಮಾನವೀಯತೆಯಿಂದ ವರ್ತಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ – ಗಣಿಗ ರವಿಗೆ ವಿಜಯೇಂದ್ರ ಟಾಂಗ್

Spread the loveವಿಜಯಪುರ:ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ ಎಂದು ಶಾಸಕ ಗಣಿಗ ರವಿ  ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ