Breaking News

ಇಂದು ನನ್ನ ಗಂಡನ ಹುಟ್ಟುಹಬ್ಬ, ಪ್ರಶ್ನೆ ಸ್ವಲ್ಪ ಚಿಕ್ಕದಾಗಿ ಕೇಳಿ: ಪ್ರಿಯಾಂಕಾ ಗಾಂಧಿ ಹಾಸ್ಯ

Spread the love

ನವದೆಹಲಿ: ʻಇಂದು ನನ್ನ ಗಂಡನ ಹುಟ್ಟುಹಬ್ಬ, ನಿಮ್ಮ ಪ್ರಶ್ನೆಗಳನ್ನ ಸ್ಬಲ್ಪ ಚಿಕ್ಕದಾಗಿ ಕೇಳಿʼ ಎಂದು ಸಂಸದೆ ಪ್ರಿಯಾಂಕಾ ಗಾಂಧಿ  ಹಾಸ್ಯ ಮಾಡಿದ ಪ್ರಸಂಗ ನಡೆದಿದೆ.

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ  ಲೋಕಸಭೆಯಲ್ಲಿ ಸೋಲಾದ ಒಂದು ದಿನದ ನಂತರ ದೆಹಲಿಯ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು. ಈ ವೇಳೆ ಪತ್ರಕರ್ತರೊಬ್ಬರು  ಇನ್ನಷ್ಟು ಪ್ರಶ್ನೆಗಳಿವೆ ನಿಮ್ಮ ಬಳಿ ಸಮಯ ಇದೆಯೇ? ಅಂತ ಪ್ರಶ್ನೆ ಮಾಡಿದ್ರು, ಇದಕ್ಕೆ ಮುಗುಳು ನಕ್ಕ ಪ್ರಿಯಾಂಕಾ, ಇಂದು ನನ್ನ ಪತಿಯ ಹುಟ್ಟುಹಬ್ಬ. ನಿಮ್ಮ ಪ್ರಶ್ನೆಗಳನ್ನ ಚಿಕ್ಕದಾಗಿ ಕೇಳಿ ಅಂತ ಹಾಸ್ಯ ಮಾಡಿದ್ರು. ಇದು ಅಲ್ಲಿದ್ದವರನ್ನ ನಗೆಗಡಲಲ್ಲಿ ತೇಲಿಸಿತು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಯನಾಡು ಸಂಸದೆ, ಎನ್‌ಡಿಎ ಸರ್ಕಾರದ  ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಅಗತ್ಯ ಮತ ಸಿಗದೇ ಹಿನ್ನಡೆಯಾಯಿತು. ಎನ್​ಡಿಎ ನಾಯಕರಿಗೆ ಏಪ್ರಿಲ್​ 17 ಕರಾಳ ದಿನವಾಗಿದೆ. ಏಕೆಂದರೆ, ಮೊದಲ ಬಾರಿಗೆ ಸೋಲಿನ ಭಯ ಕಂಡಿದ್ದಾರೆ. ಇದು ಎನ್​ಡಿಎ ಸರ್ಕಾರದ ಅಹಂಕಾರಕ್ಕೆ ಮಹಿಳೆಯರು ಕೊಟ್ಟ ಉತ್ತರ. ಮಸೂದೆಯ ಸೋಲು ಪ್ರಜಾಪ್ರಭುತ್ವಕ್ಕೆ (Democracy) ಸಿಕ್ಕ ಗೆಲುವು. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಎನ್‌ಡಿಎ ಆಡಳಿತದ ವೈಫಲ್ಯ
ಎನ್​ಡಿಎ ಸರ್ಕಾರವು ಮಹಿಳಾ ಮೀಸಲಾತಿ ವಿಚಾರವನ್ನ ತನ್ನ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ಹೊರತು, ಜಾರಿಗೆ ತರುವ ಇಚ್ಛೆಯನ್ನೇ ಹೊಂದಿಲ್ಲ. ಅಧಿಕಾರದಲ್ಲಿ ಇನ್ನಷ್ಟು ಕಾಲ ಮುಂದುವರೆಯಲು ನಡೆಸಿರುವ ಕುತಂತ್ರ ಇದು. ವಿರೋಧ ಪಕ್ಷಗಳು ಈ ಮಸೂದೆಯ ಲೋಪದೋಷಗಳನ್ನ ಎತ್ತಿ ತೋರಿಸಿದವು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಕೊರತೆಯಿಂದ ಮಸೂದೆ ಬಿದ್ದಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನ ತೋರಿಸುತ್ತದೆ. ಇದು ಸಂವಿಧಾನ ಮತ್ತು ವಿರೋಧ ಪಕ್ಷದ ಒಗ್ಗಟ್ಟಿನ ಗೆಲುವು ಎಂದು ಬಣ್ಣಿಸಿದ್ದಾರೆ.

ಇಂದು ನಿಜಕ್ಕೂ ನನಗೆ ಸಂತೋಷವಾಗುತ್ತಿದೆ. ವಿಪಕ್ಷಗಳು ಒಟ್ಟಾಗಿ ಕಣಕ್ಕೆ ನಿಂತರೆ ಪರಿಣಾಮ ಹೇಗಿರುತ್ತದೆ ಎಂಬುದು ಈಗ ಎನ್‌ಡಿಎ ಸರ್ಕಾರಕ್ಕೆ ಗೊತ್ತಾಗಿದೆ. ನೀವು ನಿಜವಾಗಿಯೂ ಮಹಿಳೆಯರಿಗಾಗಿ ಏನನ್ನಾದರೂ ಮಾಡಬೇಕು ಅಂದುಕೊಂಡಿದ್ದರೆ, 2023ರ ‘ನಾರಿ ಶಕ್ತಿ ವಂದನ್’ ಮಸೂದೆಯನ್ನ ಮರಳಿ ತನ್ನಿ, ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಅದನ್ನ ಬಿಟ್ಟು ಮಹಿಳೆಯರ ಸಬಲೀಕರಣದ ನೆಪದಲ್ಲಿ ಆಡಳಿತ ಮುಂದುವರೆಸುವ ಪಿತೂರಿ ಮಾಡೋದು ಬೇಡ ಎಂದು ತಿವಿದಿದ್ದಾರೆ.

ಮಹಿಳೆಯರನ್ನು ದಾಳವನ್ನಾಗಿ ಬಳಕೆ ಮಾಡುವ ಆಟವನ್ನ ಎನ್​ಡಿಎ ನಿಲ್ಲಿಸಬೇಕು. ಮಸೂದೆ ಅಂಗೀಕಾರವಾಗಿದ್ದರೆ ನಾವು ಗೆದ್ದೆವು ಎಂದು ಸರ್ಕಾರ ಹೇಳಿಕೊಳ್ಳುತ್ತಿತ್ತು. ಈಗ ಅದು ವಿಫಲವಾಗಿರುವುದರಿಂದ ಇತರ ಪಕ್ಷಗಳನ್ನ ಮಹಿಳಾ ವಿರೋಧಿ ಎಂದು ಬಿಂಬಿಸುತ್ತಿವೆ ಎಂದು ಕೆಂಡಾಮಂಡಲರಾಗಿದ್ದಾರೆ.

ಲೋಕಸಭೆಯಲ್ಲಿ ಮಸೂದೆಗೆ ಸೋಲು
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಏಪ್ರಿಲ್​17ರಂದು ಸೋಲಾಗಿದೆ. ಮಸೂದೆ ಪರ 298 ಸದಸ್ಯರು ಮತ ಚಲಾಯಿಸಿದರೆ, ಮಸೂದೆಗಳ ವಿರುದ್ಧ 230 ಸದಸ್ಯರು ಮತ ಚಲಾಯಿಸಿದರು. ಒಟ್ಟಾರೆಯಾಗಿ 528 ಮತ ಚಲಾಯಿಸಿದ್ದು, ಮಸೂದೆ ಅಂಗೀಕಾರಕ್ಕೆ 352 ಸದಸ್ಯರ ಬೆಂಬಲವಿಲ್ಲದೇ ಸೋಲು ಕಂಡಿತು.


Spread the love

About Laxminews 24x7

Check Also

ʻಕೈʼ ನಾಯಕ ಪವನ್ ಖೇರಾಗೆ ಸುಪ್ರೀಂಕೋರ್ಟ್ ಶಾಕ್ – ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನಿಗೆ ತಡೆ

Spread the loveನವದೆಹಲಿ: ಅಸ್ಸಾಂ ಸಿಎಂ ಪತ್ನಿ ರಿಂಕಿ ಭುಯಾನ್ ಶರ್ಮಾ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ