Breaking News

ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ತಿದ್ದುಪಡಿ ವಿಧೇಯಕ ಅಂಗೀಕಾರ: ಇನ್ಮುಂದೆ ತೆರಿಗೆ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು?

Spread the love

ಬೆಂಗಳೂರು: ಮೋಟಾರು ವಾಹನ ತೆರಿಗೆಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಅಂಗೀಕೃತವಾಯಿತು.

ಸಿಎಂ ಸಿದ್ದರಾಮಯ್ಯ 2023-24ರ ಸಾಲಿಗೆ ಮಂಡಿಸಿದ ಬಜೆಟ್ ಪ್ರಸ್ತಾವನೆಯಂತೆ ತೆರಿಗೆ ಪರಿಷ್ಕರಣೆ ಸಂಬಂಧ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ, ‌ಇನ್ನು ಮುಂದೆ ವಾಹನ ಮಾಲೀಕರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ.

ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ: ಸರಕು ವಾಹನದ ಒಟ್ಟಾರೆ ತೂಕ 1,500 ಕೆ.ಜಿ – 12,000 ಕೆ.ಜಿ. ವರೆಗಿದ್ದರೆ, ಅಂಥ ಸರಕು ವಾಹನಗಳಿಗೆ ನೋಂದಣಿ ಸಮಯದಲ್ಲಿ 6 ವರ್ಗಗಳಲ್ಲಿ ಪೂರ್ಣಾವಧಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಹಿಂದೆ 1,500 ಕೆ.ಜಿ-5,500 ಕೆ.ಜಿ.ವರೆಗೆ ಕೇವಲ 3 ವರ್ಗಗಳು ಇದ್ದವು.

ತಿದ್ದುಪಡಿ ವಿಧೇಯಕದಂತೆ ಹೊಸ ಸರಕು ವಾಹನಗಳಿಗೆ ಒಟ್ಟಾರೆ ತೂಕ 1,500 ಕೆ.ಜಿ ಯಿಂದ 2,000 ಕೆ.ಜಿ.ವರೆಗೆ ಇದ್ದರೆ 20,000 ರೂ ಪೂರ್ಣಾವಧಿ ತೆರಿಗೆ ವಿಧಿಲಾಗುತ್ತದೆ. ಈ ಹಿಂದೆ 10,000 ರೂ. ಇತ್ತು. 2,000 ಕೆ.ಜಿ – 3,000 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 30,000 ರೂ ಪೂರ್ಣಾವಧಿ ತೆರಿಗೆ, 3,000 ಕೆ.ಜಿ – 5,500 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 40,000 ರೂ., 5,500 ಕೆ.ಜಿ – 7,500 ಕೆ.ಜಿ.ವರೆಗಿನ ಸರಕು ವಾಹನಗಳಿಗೆ 60,000 ರೂ., 7,500 ಕೆ.ಜಿ – 9,500 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳಿಗೆ 80,000 ರೂ. ಮತ್ತು 9,500 ಕೆ.ಜಿ. – 12,000 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನು 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

ಈಗಾಗಲೇ ನೋಂದಣಿಯಾಗಿರುವ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸರಕು ವಾಹನ ನೋಂದಣಿಯಾದಾಗಿನಿಂದ ಅದರ ಬಳಕೆ ವರ್ಷದ ವರೆಗಿನ ತೆರಿಗೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. 1,500 ಕೆ.ಜಿ-2,000 ಕೆ.ಜಿ ತೂಕದ ಸರಕು ವಾಹನದಿಂದ ಹಿಡಿದು 9,500ಕೆ.ಜಿ-12,000 ಕೆ.ಜಿ.ವರೆಗೆ ಇರುವ ವಿವಿಧ ಆರು ಸರಕು ವಾಹನ ವರ್ಗಗಳಿಗೆ ತೆರಿಗೆ ಏರಿಸಲಾಗಿದೆ. ವಿವಿಧ ಆರು ವರ್ಗಗಳ ಸರಕು ವಾಹನದ ಆಧಾರದಲ್ಲಿ 2 ವರ್ಷ ಮೀರಿದ ಸರಕು ವಾಹನಕ್ಕೆ ಕನಿಷ್ಠ 18,600ರೂ. ನಿಂದ ಗರಿಷ್ಠ 93,000 ರೂ. ವರೆಗೆ ಪೂರ್ಣಾವಧಿ ತೆರಿಗೆ ಹೆಚ್ಚಿಸಲಾಗಿದೆ. ಅದೇ ರೀತಿ 3 ವರ್ಷದಿಂದ 15 ವರ್ಷ ಹಳೆಯದಾದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಗಳು ದುಪ್ಪಟ್ಟಾಗಿವೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ