ಬೆಳಗಾವಿ: ಸರ್ಕಾರಿ ಗೋಮಾಳ ಭೂಮಿಯನ್ನು ದನಕರುಗಳ ಮೇಯಿಸುವಿಕೆ ಹಾಗೂ ಗ್ರಾಮಸ್ಥರ ಸಾಮೂಹಿಕ ಬಳಕೆಗೆ ಮೀಸಲಿಡುವಂತೆ ಆಗ್ರಹಿಸಿ, ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ನಿವಾಸಿಗಳು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕಕ್ಕೇರಿ ಗ್ರಾಮದಲ್ಲಿರುವ 5 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಲು ವರದಿ ಸಲ್ಲಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಈ ಜಮೀನು ದನಕರುಗಳ ಮೇಯಿಸುವಿಕೆಗೆ ಅತ್ಯಗತ್ಯವಾಗಿದ್ದು, ಅದನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ರೈತರು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಗೋಮಾಳ ಭೂಮಿಯನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ವರ್ಗಾಯಿಸದೆ, ಅದರ ಮೂಲ ಉದ್ದೇಶಕ್ಕೇ ಮೀಸಲಿಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ, ಸರ್ಕಾರಿ ಭೂಮಿಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೋಚೇರಿ, ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ರುದ್ರಗೌಡ ಪಾಟೀಲ, ಚೇತನ್ ಮನ್ನೀರಿಕರ್, ಕಲಪ್ಪಾ ಏಮೋಜಿ, ನಂದಕುಮಾರ ಬಾಳೇಕುಂದ್ರಿ, ವಿರೇಂದ್ರ ರಾಮಜಿ, ಸಂದೀಪ ಕೋಲಕಾರ, ಜಿನಪ್ಪ ಹಟ್ಟಿಹೊಳಿ, ಯಲ್ಲಪ್ಪ ಹಿಂಡಲಗಿ, ಫಕೀರ ಹೊನ್ನಗೇಕರ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7