Breaking News

ಇದು ನನ್ನ ಮೇಲೆ ಅನುಮಾನ ಬರುವಂತೆ ನಡೆಯುತ್ತಿರುವ ತನಿಖೆ – ಪ್ರಿಯಾಂಕ್‌ ಖರ್ಗೆ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Spread the love

ಹಾಸನ: ಸ್ಟಿಂಗ್ ಆಪರೇಷನ್‌ ಪ್ರಸ್ತಾಪ ಆದ ಮೊದಲ ದಿನದಿಂದ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಮ್‌ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಸರ್ಚ್ ವಾರೆಂಟ್ ಕೊಟ್ಟಿದ್ದಾರೆ. ಅವರಿಗೆ ಬೇಕಾದ ಪೊಲೀಸರನ್ನು ನೇಮಕ ಮಾಡಿದ್ದು, ನಮ್ಮ ಕಾರ್ಯಕರ್ತರ ಸುತ್ತ ಸುತ್ತುತ್ತಿದ್ದಾರೆ. ಇದು ನನ್ನ ಮೇಲೆ ಅನುಮಾನ ಬರುವ ರೀತಿಯಲ್ಲಿ ನಡೆಯುತ್ತಿರುವ ತನಿಖೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಚಿವ ಪ್ರಿಯಾಂಕ್‌ ಖರ್ಗೆ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾವಿನಕೆರೆಯ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರು ಮಾತನಾಡಿದರು. ಈ ವೇಳೆ, ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ವಾಹಿನಿಯ ಒಬ್ಬರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ಟಿಂಗ್ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಷಯ ಪ್ರಸ್ತಾಪ ಆದ ಮೊದಲ ದಿನದಿಂದಲೇ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಮ್‌ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಸರ್ಚ್ ವಾರೆಂಟ್ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರೇನು ಅಪರಾಧ ಚಟುವಟಿಕೆಗಳಲ್ಲಿ ಇದ್ದಾರೆ ಎನ್ನುವ ರೀತಿ ಆಪಾದನೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯಾವ ವ್ಯಕ್ತಿ ಕಾಂಗ್ರೆಸ್  ಕಾರ್ಯಕರ್ತರ ಜೊತೆಗೂಡಿ ಸ್ಟಿಂಗ್ ಆಪರೇಷನ್‌ನ್ನು 2023 ರಲ್ಲಿ ಯಾಕಾಗಿ ಮಾಡಿದ್ದಾರೆ? ಅವರನ್ನು ರಕ್ಷಿಸಲು ಸರ್ಕಾರವೇ ಸಂಪೂರ್ಣ ಸಹಕಾರ ಕೊಡುತ್ತಿದೆ. ಸರ್ಚ್ ವಾರೆಂಟ್ ಹೆಸರಿನಲ್ಲಿ ನಮ್ಮ ವಾರ್ ರೂಮ್ ಹುಡುಗರ ಕುಟುಂಬದ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕಿ ದಾಳಿ ಮಾಡುತ್ತಿದ್ದಾರೆ. ಭಯಬೀತಿ ವಾತಾವರಣ ಉಂಟು ಮಾಡಿ ಮಾಹಿತಿ ಪಡೆಯಲು ಹೊರಟಿದ್ದೀರಿ. ಆ ವ್ಯಕ್ತಿಗಳು ಏಕೆ ಸ್ಟಿಂಗ್ ಆಪರೇಷನ್ ಮಾಡಿದ್ರು, ಅದರ ಬಗ್ಗೆ ಮುಖ್ಯಮಂತ್ರಿಗೆ, ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ಅದನ್ನೆಲ್ಲಾ ಮುಚ್ಚಿಟ್ಟು ನಮ್ಮನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿದ್ದೀರಿ. ಮೊದಲಿನಿಂದಲೂ ತನಿಖೆ ದಾರಿ ತಪ್ಪಿಸುತ್ತಿದ್ದೀರಿ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಹುಡುಗರ ಮೊಬೈಲ್, ಲ್ಯಾಪ್‌ಟಾಪ್ ವಶಪಡಿಸಿಕೊಳ್ಳುತ್ತಿದ್ದೀರಿ. ನಮ್ಮ ಪಕ್ಷದದಿಂದಲೇ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎನ್ನುವ ರೀತಿ ಹುನ್ನಾರ ಮಾಡುತ್ತಿದ್ದೀರಿ. ಅದನ್ನು ಎದುರಿಸುವ ಶಕ್ತಿ ನನಗಿದೆ. ಅಷ್ಟು ಸುಲಭವಾಗಿ ಬಿಡಲ್ಲ, ಹೋರಾಟ ಮಾಡುತ್ತೇವೆ. ಅವರು ಮುಚ್ಚಿ ಹಾಕಲು ಪ್ರಯತ್ನ ಮಾಡಿದಷ್ಟು ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಕ್ಕಿ ಸಾವಿನ ಪ್ರಕರಣದ ಬಗ್ಗೆ ಸಾಕ್ಷಿ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ, ವೈಯಕ್ತಿಕವಾಗಿ ನಾನು ಟೀಕೆ ಮಾಡುತ್ತಿಲ್ಲ. ನಡೆದಿರುವ ಘಟನೆ, ಅದನ್ನು ಯಾಕೆ ಮುಚ್ಚಿ ಹಾಕಿದ್ರು? ಯುಡಿಆರ್ ಏಕೆ ಮಾಡಿದ್ರು, ತನಿಖೆ ಏಕೆ ಮಾಡಲಿಲ್ಲ, ಮರಣೋತ್ತರ ಪರೀಕ್ಷೆ ಯಾಕೆ ಮಾಡಲಿಲ್ಲ? ಅಸಹಜ ಸಾವಾಗಿದ್ದರೆ ಏಕೆ ಮರಣೋತ್ತರ ಪರೀಕ್ಷೆ ಮಾಡಲಿಲ್ಲ? ಆ ಕುಟುಂಬಕ್ಕೆ ಹತ್ತು ಲಕ್ಷ ರೂ. ಕೊಡ್ತಿನಿ ಅಂಥ ಹೇಳಿ ಎರಡು ಲಕ್ಷ ರೂ. ಕೊಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಎಲ್ಲದಕ್ಕೂ ಸಾಕ್ಷಿ, ಸಾಕ್ಷಿ ಅಂಥ ನಮ್ಮನ್ನು ಕೇಳುವುದಾದರೆ ಪೊಲೀಸ್ ಇಲಾಖೆ ಯಾಕೆ ಬೇಕು? ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಲು ಪೊಲೀಸ್ ಇಲಾಖೆ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಬಗ್ಗೆ ಗೃಹಸಚಿವರು ಬೋಲ್ಡ್ ಸ್ಟೆಪ್ ಎಲ್ಲಿ ತೆಗೆದುಕೊಂಡಿದ್ದಾರೆ? ಮುಚ್ಚಿ ಹಾಕುವ ಸ್ಟೆಪ್ ತೆಗೆದುಕೊಂಡಿದ್ದಾರೆ. ಮೊದಲ ದಿನದಿಂದಲೂ ಮುಚ್ಚಿ ಹಾಕುವ ಪ್ರಯತ್ನ ನಡಿತಿದೆ ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಅವರು ಸುಳ್ಳು ಹೇಳ್ತಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಸತ್ಯ ಹೇಳುವ ಕುಮಾರಸ್ವಾಮಿ, ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ, ಬಹುಮತದ ಸರ್ಕಾರ ಇಲ್ಲದೆ ಇದ್ದರೂ, ಕಾಂಗ್ರೆಸ್ ಬೆಂಬಲ ಇಲ್ಲದೆ ಇದ್ದರೂ ಸಹ ಸಾಲಮನ್ನಾ ಮಾಡಿ ತೋರಿಸಿದ್ದೇನೆ. ಕುಮಾರಸ್ವಾಮಿ ಸಾರ್ವಜನಿಕವಾಗಿ ಮಾತನಾಡಿದ್ದನ್ನು ಮಾಡಿ ತೋರಿಸಿರುವ ಹಲವಾರು ಉದಾಹರಣೆಗಳಿವೆ. ಮುಂದೆ ನೋಡೋಣ ಜನ ಯಾರನ್ನು ನಂಬುತ್ತಾರೆ ಎಂದು ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

Spread the loveಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ