Breaking News

KSOU ಶಿವಮೊಗ್ಗ ಪ್ರಾದೇಶಿಕ ಕಚೇರಿಯ ನಿರ್ದೇಶಕ ಅಮಾನತು

Spread the love

ಶಿವಮೊಗ್ಗ: ನಗರದ  ಕೆಎಸ್‌ಓಯು  ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷಾ ಅಕ್ರಮ ಆರೋಪದ ವರದಿ ಪ್ರಸಾರವಾಗುತ್ತಿದ್ದಂತೆ ಕಚೇರಿಯ ನಿರ್ದೇಶಕ ಬಿ.ಎಂ.ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.

ವಿಶ್ವವಿದ್ಯಾಲಯದ ಘನತೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಪರೀಕ್ಷಾಂಗ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮೊಬೈಲ್, ಪುಸ್ತಕ ಕೊಟ್ಟು ಪರೀಕ್ಷೆ ಬರೆಸಲಾಗಿತ್ತು. ಪರೀಕ್ಷಾ ಅಕ್ರಮದ ವಿಡಿಯೋ ಸಮೇತ ʻಪಬ್ಲಿಕ್ ಟಿವಿʼ ಸುದ್ದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಅಮಾನತುಗೊಂಡ ಬಿ.ಎಂ.ಸ್ವಾಮಿಯವರ ಸ್ಥಾನಕ್ಕೆ ಹಾವೇರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪ್ರಾದೇಶಿಕ ಕೇಂದ್ರದ ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ.

ಏನಿದು ವಿವಾದ?
ರಾಜ್ಯದಲ್ಲಿ ಕೆಪಿಎಸ್‌ಸಿ ವಿವಾದದ ಬಳಿಕ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮವೊಂದು ಬೆಳಕಿಗೆ ಬಂದಿದ್ದು, ಹಣ ಕೊಟ್ಟರೇ ಮೊಬೈಲ್, ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಕೆಎಸ್‌ಓಯು ಶಿವಮೊಗ್ಗ  ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನೇತೃತ್ವದಲ್ಲಿ ಹಣ ಪಡೆದು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡಿಸುತ್ತಿರುವ ಕರಾಳ ದಂಧೆ ಬಟಾಬಯಲಾಗಿದೆ.

ಇಲ್ಲಿ ಹಣ ಕೊಟ್ಟರೆ ಸಾಕು, ಪರೀಕ್ಷೆ ಕೂಡ ತುಂಬಾ ಸಲೀಸಾಗಲಿದೆ. ಹಣ ಕೊಟ್ಟು ಪರೀಕ್ಷೆಯನ್ನು ಹೇಗೆ ಬೇಕಾದರೂ ಬರೆಯಬಹುದಾಗಿದೆ. ಹಣ ಕೊಟ್ಟವರಿಗೆ ಪುಸ್ತಕ ಮತ್ತು ಮೊಬೈಲ್ ಇಟ್ಟುಕೊಂಡೇ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ ನೀಡಿದವರಿಗೆ ಎರಡನೇ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ಸಕಲ ವ್ಯವಸ್ಥೆ ಮಾಡಲಾಗುತ್ತಿದ್ದರೆ, ಹಣ ನೀಡದವರಿಗೆ ಮೊದಲ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆ ಆರಂಭವಾದ ಅರ್ಧ ಗಂಟೆ ಬಳಿಕ ವಿದ್ಯಾರ್ಥಿಗಳ ಲೆಕ್ಕ ಮಾಡಲು ಪ್ರಾದೇಶಿಕ ನಿರ್ದೇಶಕ ಸ್ವಾಮಿ ಅವರು ಬರುತ್ತಿದ್ದರು. ಅದೇ ಸಮಯದಲ್ಲಿ ಪರೀಕ್ಷಾ ಕೇಂದ್ರದ ಪ್ರತ್ಯೇಕ ಕೊಠಡಿಯಲ್ಲಿ ಖುದ್ದಾಗಿ ನಿಂತು ಅವರು ಸಾಮೂಹಿಕ ನಕಲು ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಳಿಕ ಎಸ್ ಡಿಸಿಗಳಾದ ವಿನಯಾ ಕೆ.ಜೆ., ನಿಂಗಾ ನಾಯ್ಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡಾಟಾ ಎಂಟ್ರಿ ಆಪರೇಟರ್ ಹರೀಶ್ ಅವರನ್ನು ಮುಂದೆ ಬಿಟ್ಟು ಹಣ ವಸೂಲಿ ಮಾಡಿಸಲಾಗುತ್ತದೆ.

ಒಂದು ವಿಷಯಕ್ಕೆ ಒಂದು ಸಾವಿರ ರೂ.ನಂತೆ ಓರ್ವ ವಿದ್ಯಾರ್ಥಿಯಿಂದ ಹಣ ವಸೂಲಿ ಮಾಡುತ್ತಿರುವ ಆರೋಪವಿದ್ದು, ಪ್ರತಿನಿತ್ಯ 70 ರಿಂದ 100 ವಿದ್ಯಾರ್ಥಿಗಳ ಬಳಿ ಪರೀಕ್ಷೆ ಮುಗಿದ ಬಳಿಕ ಹಣ ವಸೂಲಿ ಮಾಡಲಾಗುತ್ತಿದೆ. ಪರೀಕ್ಷೆ ಬರೆದ ನಂತರ ಅಲ್ಲೇ ವಿದ್ಯಾರ್ಥಿಗಳಿಂದ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಶ್ರಮವನ್ನು ನಿರ್ದೇಶಕ ಸ್ವಾಮಿ ಅವರು ಮಣ್ಣುಪಾಲು ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪವಿರುವ ಕೆಎಸ್‌ಓಯು ಪ್ರಾದೇಶಿಕ ಕಚೇರಿಯೇ ಈ ಪರೀಕ್ಷಾ ಕೇಂದ್ರವಾಗಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪರೀಕ್ಷೆಗಳು ನಡೆಯುತ್ತಿದ್ದು, ಅಕ್ಟೋಬರ್ 7ರಿಂದ ಆರಂಭಗೊಂಡು ಮುಕ್ತ ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ನವೆಂಬರ್ 20ರವರೆಗೆ ನಡೆಯಲಿವೆ.


Spread the love

About Laxminews 24x7

Check Also

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

Spread the loveಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ