ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ.24ರಿಂದ ಆರಂಭಿಸಲಿದೆ.
3ನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಸೇರಲು ಇಚ್ಛಿಸುವ ಕೋರ್ಸ್ ಶುಲ್ಕಗಳ ಆಧಾರದ ಮೇಲೆ ಸೆ.28ರೊಳಗೆ ಕಾಷನ್ ಡೆಪಾಸಿಟ್ ಕಟ್ಟುವುದು ಕಡ್ಡಾಯ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕಾಷನ್ ಡೆಪಾಸಿಟ್ ಕಟ್ಟಿದ ಅಭ್ಯರ್ಥಿಗಳಿಗೆ ಸೆ.25ರಿಂದ 29ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ದಾಖಲಿಸಿದ್ದ ಆಪ್ಷನ್ಸ್ ಅನ್ನು ಪರಿಗಣಿಸುವುದಿಲ್ಲ. ಈ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.
ಯಾರೆಲ್ಲ ಅರ್ಹರು?
ಇದುವರೆಗೂ ಸೀಟು ಹಂಚಿಕೆಯಾಗದವರು, ಸೀಟು ಹಂಚಿಕೆ ನಂತರ ದಂಡ ಪಾವತಿಸಿರುವ ಅಭ್ಯರ್ಥಿಗಳು, ಸೀಟು ಹಂಚಿಕೆಯಾಗಿ ಈಗಾಗಲೇ ಪ್ರವೇಶ ಪಡೆದಿರುವ ಹಾಗೂ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೆಡೇಷನ್ ಮಾಡಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು 3ನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಯಾರು ಅರ್ಹರಲ್ಲ?
ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದಿರುವ ಹಾಗೂ ಚಾಯ್ಸ್-4 ಹಾಕಿ ಕೌನ್ಸೆಲಿಂಗ್ನಿಂದ ಹೊರ ಹೋಗಿರುವವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮುಂಗಡ ಪಾವತಿ ಎಷ್ಟು?
ಒಂದು ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ನ ಸರ್ಕಾರಿ (ಜಿ) ಸೀಟುಗಳು ಹಾಗೂ ದಂತ ವೈದ್ಯಕೀಯ ಕೋರ್ಸ್ ನ ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.
ಒಟ್ಟು 12 ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು G (ಸರ್ಕಾರಿ) ಮತ್ತು P (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ. 25 ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು ಎಂದು ವಿವರಿಸಿದ್ದಾರೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಕಟ್ಟುವ ಅಗತ್ಯ ಇರುವುದಿಲ್ಲ. ಇತರೆ ಕೋರ್ಸ್ ಗಳಿಗೆ ಪಾವತಿಸಿರುವ ಶುಲ್ಕವನ್ನು ಕಾಷನ್ ಡೆಪಾಸಿಟ್ ಎಂದು ಪರಿಗಣಿಸುವುದಿಲ್ಲ.3ನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಭ್ಯರ್ಥಿಯು ಪಾವತಿಸಿದ್ದ ಕಾಷನ್ ಡೆಪಾಸಿಟ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಎಂಸಿಸಿ 3ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಕೆಇಎ 3ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ. ಎಂಸಿಸಿ ಸೀಟು ಹಂಚಿಕೆ ನಂತರ ಕೆಇಎ 3ನೇ ಸುತ್ತಿನಲ್ಲೂ ಸೀಟು ಹಂಚಿಕೆಯಾಗಿ ಕೆಇಎ ಸೀಟು ಉಳಿಸಿಕೊಳ್ಳಬೇಕಿದ್ದರೆ ಅಂತಹವರು ಖುದ್ದು ಪತ್ರದ ಮೂಲಕ ತಿಳಿಸಬೇಕು. ಇಲ್ಲದಿದ್ದರೆ ಅಂತಹವರನ್ನು 3ನೇ ಸುತ್ತಿನ ಕೌನ್ಸೆಲಿಂಗ್ ಗೆ ಪರಿಗಣಿಸುವುದಿಲ್ಲ ಎಂದು ವಿವರಿಸಿದ್ದಾರೆ.
ಈಗಾಗಲೇ ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ಸೇರಲು ಆಸಕ್ತಿ ಇದ್ದರೆ ಮಾತ್ರ ಆಪ್ಷನ್ಸ್ ದಾಖಲಿಸಲು ಸಲಹೆ ನೀಡಿದ್ದಾರೆ. ಸೀಟು ಸಿಕ್ಕ ನಂತರ, ಮೊದಲಿನ ಕಾಲೇಜಿನಿಂದ ಮೂಲ ದಾಖಲೆ ಪಡೆಯುವುದನ್ನು ಖಾತರಿಪಡಿಸಿಕೊಂಡೇ ಆಪ್ಷನ್ಸ್ ದಾಖಲಿಸಿ ಎಂದೂ ಅವರು ಹೇಳಿದ್ದಾರೆ.
Laxmi News 24×7