Breaking News

ಹಿರಿಯ ನಟ ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಸದನದಲ್ಲಿ ಪರಮೇಶ್ವರ್ ಅಭಿನಂದನೆ

Spread the love

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.

ಸದನದಲ್ಲಿ ಮಾತನಾಡಿದ ಅವರು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿದೆ. ಚಿತ್ರರಂಗದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸುಲಭವಾಗಿ ದೊರೆಯುವ ಪ್ರಶಸ್ತಿ ಇದಲ್ಲ. ಅಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಅನಂತ್ ನಾಗ್ ಅವರು ಪಡೆದಿರುವುದು ಮಹತ್ವದ ಸಂಗತಿ. ರಾಷ್ಟ್ರ ಮಟ್ಟದಲ್ಲಿ ಕಲಾವಿದರ ಸಾಧನೆ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವುದು ಇಡೀ ಚಿತ್ರರಂಗ ಹಾಗೂ ಕಲಾ ಕ್ಷೇತ್ರಕ್ಕೆ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಹೇಳಿದರು.

1970ರ ದಶಕದಲ್ಲಿ ರಂಗಭೂಮಿಯಿಂದ ತಮ್ಮ ಕಲಾ ಪಯಣ ಆರಂಭಿಸಿದ ಅನಂತ್ ನಾಗ್ ಅವರು ಅದರ ಜೊತೆಜೊತೆಯಲ್ಲಿಯೇ ಕಿರುತೆರೆಗೂ ಕಾಲಿಟ್ಟರು. 70ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಅವರು, ಚಿತ್ರರಂಗಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ತಮ್ಮ ಸಹೋದರ ಶಂಕರ್ ನಾಗ್ ಅವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಅಲೆಯೊಂದನ್ನು ಹುಟ್ಟುಹಾಕಿದರು ಎಂದು ಸ್ಮರಿಸಿದರು.

ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಕಾಲಘಟ್ಟದಲ್ಲಿಯೇ ಅನಂತ್ ನಾಗ್ ಅವರು ವಿಭಿನ್ನ ರೀತಿಯ ಚಿತ್ರಗಳ ಮೂಲಕ ತಮ್ಮದೇ ಆದ ಹೊಸ ಹಾದಿಯನ್ನು ರೂಪಿಸಿಕೊಂಡರು. 1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆರಂಭವಾದ ಈ ಹೊಸ ಅಲೆಯ ನಾಯಕತ್ವ ವಹಿಸಿದವರಲ್ಲಿ ಅನಂತ್ ನಾಗ್ ಪ್ರಮುಖರು ಎಂದು ಹೇಳಿದರು.

ಅನಂತ್ ನಾಗ್ ಅವರು ಕಲಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 1989-94ರ ಅವಧಿಯಲ್ಲಿ ಅವರನ್ನು ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಯಿತು. ನಂತರ 1994ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾದ ಅವರು, ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದರು ಎಂದು ತಿಳಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಅನಂತ್ ನಾಗ್ ಅವರ ಪಯಣ ಅಲ್ಪಾವಧಿಯದ್ದಾಗಿತ್ತು. ನಂತರ ಸಕ್ರಿಯ ರಾಜಕಾರಣದಿಂದ ದೂರ ಸರಿದು ಮತ್ತೆ ಚಲನಚಿತ್ರ ಕ್ಷೇತ್ರದತ್ತ ಮುಖ ಮಾಡಿ ತಮ್ಮ ಕಲಾ ಪಯಣವನ್ನು ಮುಂದುವರಿಸಿದರು ಎಂದು ಹೇಳಿದರು.

ಅನಂತ್ ನಾಗ್ ಅವರು 5 ಬಾರಿ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಂದು ಬಾರಿ ಪ್ರಶಸ್ತಿ ಪಡೆಯುವುದೇ ಅತ್ಯಂತ ಕಠಿಣವಾಗಿರುವಾಗ ಐದು ಬಾರಿ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಕಲಾ ಪ್ರತಿಭೆಗೆ ಸಾಕ್ಷಿ. ನಂತರದ ವರ್ಷಗಳಲ್ಲಿ ಜೀವನವನ್ನು ಸರಳವಾಗಿ ಸ್ವೀಕರಿಸಿ ಚಲನಚಿತ್ರಗಳಲ್ಲಿ ಅಭಿನಯಿಸುವುದನ್ನೂ ಕಡಿಮೆ ಮಾಡಿಕೊಂಡರು. ಆದರೆ ಅದಕ್ಕೂ ಮೊದಲು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಾವುದೇ ಒಬ್ಬ ನಟನ ದೃಷ್ಟಿಯಿಂದ ಇದು ಆ ಕ್ಷೇತ್ರಕ್ಕೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು.

ಕನ್ನಡ ಚಿತ್ರರಂಗದಿಂದ ಮೊದಲ ಬಾರಿಗೆ ಮೇರುನಟ ಡಾ. ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತ್ತು. ಸುಮಾರು 30 ವರ್ಷಗಳ ನಂತರ ಇದೀಗ ಅನಂತ್ ನಾಗ್ ಅವರ ಪ್ರತಿಭೆ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಇದು ಅವರಲ್ಲಿರುವ ಅಪ್ರತಿಮ ಪ್ರತಿಭೆಗೆ ಸಂದ ಗೌರವ ಎಂದು ಹೇಳಿದರು.

ಭಟ್ಕಳದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು, ಕನ್ನಡದ ಜೊತೆಗೆ ಹಲವು ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್ ಅವರು ತಮ್ಮ ಕಲೆಯ ಮೂಲಕ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅನಂತ್ ನಾಗ್ ಅವರ ಪ್ರತಿಭೆಯನ್ನು ಗುರುತಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವುದು ಇಡೀ ಕರ್ನಾಟಕಕ್ಕೆ ಗೌರವ ತಂದಿದೆ. ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.


Spread the love

About Laxminews 24x7

Check Also

SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ

Spread the loveನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ