Breaking News

ಮಂಡ್ಯದ ರೈತರಿಗೆ ಸಂಕಷ್ಟ; ಅರ್ಧದಷ್ಟು ಕಬ್ಬು ಇದ್ದರೂ ಮೈಶುಗರ್ ಬಂದ್

Spread the love

ಮಂಡ್ಯ: ಸಕ್ಕರೆ ನಾಡು ಮಂಡ್ಯದ  ರೈತರ ಜೀವನಾಡಿಯಾಗಿರುವ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆಯನ್ನು ದಿಢೀರ್ ಸ್ಥಗಿತಗೊಳಿಸಿದೆ. ಮುಂದಿನ ಹಂಗಾಮಿನವರೆಗೆ ಕಾರ್ಖಾನೆ ಕಾರ್ಯನಿರ್ವಹಿಸುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದ್ದು, ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಪ್ಪಂದ ಮಾಡಿಕೊಂಡಿದ್ದ ಕಬ್ಬಿನ ಅರ್ಧದಷ್ಟನ್ನೂ ಅರೆಯದೆ ಕಾರ್ಖಾನೆ ಬಂದ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಮೈಶುಗರ್ ಕಾರ್ಖಾನೆ 4.60 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈವರೆಗೆ ಕೇವಲ 2.10 ಲಕ್ಷ ಟನ್ ಕಬ್ಬನ್ನು ಮಾತ್ರ ನುರಿಸಲಾಗಿದೆ. ಉಳಿದ ಕಬ್ಬು ಇನ್ನೂ ರೈತರ ಹೊಲಗಳಲ್ಲೇ ಉಳಿದಿದೆ.

ಬಾಯ್ಲಿಂಗ್ ಹೌಸ್ ನಿರ್ಮಾಣ ಕಾಮಗಾರಿಯ ಕಾರಣ ನೀಡಿ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೆ ಕಾರ್ಖಾನೆಯ ಆಡಳಿತ ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ ಎಂಬುದು ರೈತರ ಆರೋಪ.

ತಾಂತ್ರಿಕ ದೋಷದಿಂದ ಕಾರ್ಮಿಕರು ವಾಪಸ್
ಕಾರ್ಖಾನೆಯಲ್ಲಿ ಪದೇಪದೆ ತಾಂತ್ರಿಕ ದೋಷಗಳು ಕಾಣಿಸಿಕೊಂಡು ಯಂತ್ರೋಪಕರಣಗಳು ಕೈಕೊಡುತ್ತಿದ್ದವು. ಇದರಿಂದ ಕಬ್ಬು ಅರೆಯುವಿಕೆ ಹಲವು ಬಾರಿ ಸ್ಥಗಿತಗೊಂಡಿತ್ತು. ಕೆಲಸದಲ್ಲಿ ವಿಳಂಬವಾಗಿದ್ದರಿಂದ ಕಬ್ಬು ಕಟಾವು ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ವಾಪಸಾಗಿದ್ದಾರೆ ಎನ್ನಲಾಗಿದೆ. ಕಾರ್ಮಿಕರ ಕೊರತೆಯಿಂದ ಕಬ್ಬು ಕಟಾವು ಮಾಡಿಸಲು ಸಾಧ್ಯವಾಗದೆ ಈಗ ಬಾಯ್ಲಿಂಗ್ ಹೌಸ್ ಕಾಮಗಾರಿಯ ನೆಪ ಹೇಳಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಕ್ರಮ
ಉಳಿದಿರುವ ಕಬ್ಬನ್ನು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದ್ದಾರೆ. ಆದರೆ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದರೆ ಹೆಚ್ಚುವರಿ ಸಾರಿಗೆ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ. ಈಗಾಗಲೇ ನಷ್ಟ ಮತ್ತು ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಇದು ಮತ್ತಷ್ಟು ಹೊರೆಯಾಗಲಿದೆ.

ಸರ್ಕಾರಿ ಕಾರ್ಖಾನೆಯನ್ನೇ ನಂಬಿ ಕಬ್ಬು ಬೆಳೆದ ಮಂಡ್ಯದ ರೈತರು ಈಗ ಅನಿವಾರ್ಯವಾಗಿ ಖಾಸಗಿ ಕಾರ್ಖಾನೆಗಳತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ. ರೈತರ ಸಮಸ್ಯೆಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ? ಹೆಚ್ಚುವರಿ ಸಾಗಾಣಿಕೆ ವೆಚ್ಚದ ಹೊರೆಯಿಂದ ಅನ್ನದಾತರನ್ನು ಪಾರು ಮಾಡಲು ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.


Spread the love

About Laxminews 24x7

Check Also

ಬೆಲೆ ಏರಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಕೆಆರ್‌ಎಸ್ ಕಾರ್ಯಕರ್ತರ ಪ್ರತಿಭಟನೆ

Spread the loveಬಾಗಲಕೋಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ