ಬೆಂಗಳೂರು: ಬೆಳಗ್ಗೆ ಎದ್ದು ಹಾಲು ತರೋಕೆ ಹೋಗಿದ್ದ ಪುಟ್ಟ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು, ಹೆಸರಘಟ್ಟದ ಬಳಿ ಈ ದುರ್ಘಟನೆ ನಡೆದಿದೆ.
ನಾಲ್ಕನೇ ತರಗತಿ ಓದುತ್ತಿರುವ 9 ವರ್ಷದ ಮಧುಮಿತಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿ. ಮಧುಮಿತಾ ತನ್ನ ತಾಯಿ ಮಂಜುಶ್ರೀ ಜೊತೆ ವಾಸವಿದ್ದಳು. ಎಂದಿನಂತೆ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹಾಲು ತರಲೆಂದು ಅಂಗಡಿಗೆ ಹೋಗಿದ್ದಳು.
ಹಾಲು ಖರೀದಿಸಿ, ಅದನ್ನು ಕೈಯಲ್ಲಿ ಹಿಡಿದುಕೊಂಡು ವಾಪಸ್ ಬರುತ್ತಿದ್ದಳು. ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಏಕಾಏಕಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪುಟ್ಟ ಬಾಲಕಿ ಹಾರಿ ರಸ್ತೆಗೆ ಬಿದ್ದಿದ್ದಾಳೆ. ಈ ಇಡೀ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮಧುಮಿತಾಳ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತಕ್ಷಣ ಸ್ಥಳೀಯರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಾಣಾವರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Laxmi News 24×7