ಬೆಂಗಳೂರು: ರಾಜಾಜಿನಗರದ ಜನರ ಸರಣಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಂದುಶೇಖರ್ ಶವಗಳನ್ನು ಸಾಗಿಸಲು ಬಳಸಿದ್ದ ತಂತ್ರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪತ್ರಕರ್ತರ ಪ್ರವಾಸ ಎಂಬ ಬ್ಯಾನರ್ ಹಾಗೂ ಕಾರಿನ ಮೇಲೆ ‘ಪ್ರೆಸ್’ ಸ್ಟಿಕ್ಕರ್ ಹಾಕಿಕೊಂಡು ಶವಗಳನ್ನು ಸಾಗಿಸಿದ್ದ ಎನ್ನಲಾಗಿದೆ.
ಕಾರಿನ ಮೇಲೆ ‘ಪ್ರೆಸ್’ ಸ್ಟಿಕ್ಕರ್, ಪ್ರವಾಸದ ಬ್ಯಾನರ್
ಆರೋಪಿ ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರಿನ ನಂಬರ್ ಪ್ಲೇಟ್ ಕಾಣದಂತೆ ಅಡ್ಡಲಾಗಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂಬ ಬ್ಯಾನರ್ ಕಟ್ಟಿಕೊಂಡಿದ್ದ. ಕಾರಿನ ಗಾಜಿನ ಮೇಲೂ ‘ಪ್ರೆಸ್’ ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಪತ್ರಕರ್ತರ ಪ್ರವಾಸದ ಹೆಸರಿನಲ್ಲಿ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಈ ತಂತ್ರ ಬಳಸಿದ್ದ ಎನ್ನಲಾಗಿದೆ. ಇದೇ ರೀತಿ ಹಂತ ಹಂತವಾಗಿ ಏಳು ಶವಗಳನ್ನು ಸಕಲೇಶಪುರ, ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಗಿಸಿ ವಿಲೇವಾರಿ ಮಾಡಿದ್ದಾನೆ ಎಂದು ವರದಿಯಾಗಿದೆ.
ನಕಲಿ ದಾಖಲೆ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದ
ಮಾರ್ಗಮಧ್ಯೆ ಪೊಲೀಸರು ಅಥವಾ ಇತರರು ಕಾರನ್ನು ತಡೆದು ಪ್ರಶ್ನಿಸಿದರೆ ನಕಲಿ ವಿಸಿಟಿಂಗ್ ಕಾರ್ಡ್ಗಳು ಹಾಗೂ ಠಾಣಾ ವರದಿಯ ಪತ್ರಗಳನ್ನು ತೋರಿಸಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಪತ್ರಕರ್ತರ ಗುರುತನ್ನು ದುರುಪಯೋಗಪಡಿಸಿಕೊಂಡು ಶವ ಸಾಗಣೆಗೆ ದಾರಿ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಶವಗಳನ್ನು ಸಾಗಿಸಿದ ಮಾರ್ಗ, ಬಳಸಿದ ದಾಖಲೆಗಳು ಹಾಗೂ ಹತ್ಯೆಗಳಿಗೆ ಸಂಬಂಧಿಸಿದ ಇತರ ವಿವರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.
Laxmi News 24×7