ಬೆಂಗಳೂರು: ಹಜ್ ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಮಹತ್ವದ ಸೂಚನೆ ನೀಡಿದೆ. ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರಿಗೂ ಎರಡು ಹಂತಗಳ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಮೊದಲ ಹಂತದ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ರಾಜ್ಯ ಹಜ್ ಯಾತ್ರಿಕರ ಆರೋಗ್ಯ ಮತ್ತು ಲಸಿಕಾ ಶಿಬಿರದ ರಾಜ್ಯ ನೋಡಲ್ ಅಧಿಕಾರಿ ಡಾ. ಮಹಮೂದ್ ಷರೀಫ್ ಅವರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಯಾತ್ರಿಕರು ನಿಗದಿತ ದಿನಾಂಕದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.
ಎರಡು ಹಂತದ ವೈದ್ಯಕೀಯ ತಪಾಸಣೆ
ಹಜ್ ಯಾತ್ರೆಗೆ ದೈಹಿಕವಾಗಿ ಸಂಪೂರ್ಣ ಸದೃಢರಾಗಿರುವ ಯಾತ್ರಿಕರು ಮಾತ್ರ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಹಜ್ ಸಮಿತಿಯ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಹಂತ 1 (Stage – 1): ಪ್ರಾಥಮಿಕ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದು.
ಹಂತ 2 (Stage – 2): ಪ್ರಯಾಣಕ್ಕೆ ಕೆಲವೇ ದಿನಗಳಿರುವಾಗ ನಡೆಯುವ ಅಂತಿಮ ವೈದ್ಯಕೀಯ ತಪಾಸಣೆ ಹಾಗೂ ಕಡ್ಡಾಯ ಲಸಿಕೆ (Vaccination) ಪಡೆಯುವುದು.
ವೈದ್ಯಕೀಯ ತಪಾಸಣೆ ಎಲ್ಲಿ ಮಾಡಿಸಬೇಕು?
ಯಾತ್ರಿಕರು ತಮ್ಮ ಸಮೀಪದ ಸರ್ಕಾರಿ ಅಲೋಪತಿ ವೈದ್ಯಾಧಿಕಾರಿಗಳಿಂದ ಮಾತ್ರ ತಪಾಸಣೆಗೆ ಒಳಗಾಗಬೇಕು. ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಬೆಂಗಳೂರಿನ ಯಾತ್ರಿಕರು ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಇಂದಿರಾನಗರದ ಶ್ರೀ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಕಡ್ಡಾಯವಾಗಿ ಮಾಡಿಸಬೇಕಾದ ಲ್ಯಾಬ್ ಪರೀಕ್ಷೆಗಳು
ಸಿಬಿಸಿ (CBC – Complete Blood Count)
ರಕ್ತದಲ್ಲಿನ ಸಕ್ಕರೆ ಅಂಶ (FBS / HbA1c)
ಎದೆಯ ಎಕ್ಸ್-ರೇ (X-ray Chest PA view – ಮೂಲ ಫಿಲ್ಮ್ ತರಬೇಕು)
ಮೂತ್ರಪಿಂಡ ಪರೀಕ್ಷೆ (KFT)
ಲಿವರ್ ಪರೀಕ್ಷೆ (LFT)
ಇಸಿಜಿ (ECG) – 40 ವರ್ಷ ಮೇಲ್ಪಟ್ಟವರಿಗೆ ಹಾಗೂ ರಕ್ತದೊತ್ತಡ/ಮಧುಮೇಹ/ಸ್ಥೂಲಕಾಯ ಇರುವವರಿಗೆ ಕಡ್ಡಾಯ.
ದಾಖಲೆ ಅಪ್‌ಲೋಡ್
ವೈದ್ಯಕೀಯ ತಪಾಸಣೆ ಮುಗಿದ ಬಳಿಕ ನಿಗದಿತ ನಮೂನೆಯಲ್ಲಿ ವೈದ್ಯರ ಸಹಿ ಮತ್ತು ಮೊಹರು ಹೊಂದಿರುವ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪೇ-ಇನ್ ಸ್ಲಿಪ್/ಆನ್‌ಲೈನ್ ಪಾವತಿ ರಸೀದಿಯನ್ನು ಅಧಿಕೃತ HCoI ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಇವುಗಳ ಭೌತಿಕ ಪ್ರತಿಗಳನ್ನು ಸೆಪ್ಟೆಂಬರ್ 15ರೊಳಗೆ ಬೆಂಗಳೂರಿನಲ್ಲಿರುವ ‘ರಾಜ್ಯ ಹಜ್ ಸಮಿತಿ ಕಚೇರಿಗೆ’ ಕಡ್ಡಾಯವಾಗಿ ತಲುಪಿಸಬೇಕು. ಮೂಲ ಪ್ರಮಾಣಪತ್ರ ಮತ್ತು ಎಲ್ಲಾ ಲ್ಯಾಬ್ ವರದಿಗಳನ್ನು ಯಾತ್ರಿಕರು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಪ್ರಯಾಣದ ದಿನಾಂಕ ಹತ್ತಿರವಿರುವಾಗ ನಡೆಯುವ 2ನೇ ಹಂತದ (Stage-2) ಲಸಿಕಾ ಶಿಬಿರದ ವೇಳೆ ಇವುಗಳನ್ನು ಹಾಜರುಪಡಿಸಬೇಕಾಗುತ್ತದೆ.
Laxmi News 24×7