Breaking News

ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ವೇಳೆ ಗೋಪುರದಿಂದ ಬಿದ್ದು ಯುವಕ ದುರ್ಮರಣ

Spread the love

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ  ಕೊನೆಯ ಶನಿವಾರದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಿದ್ದ ವೇಳೆ ಗೋಪುರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ  ಪಟ್ಟಣದಲ್ಲಿ ನಡೆದಿದೆ.

ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹ್ಮತ್ ಮೃತ ದುರ್ದೈವಿ. ಶ್ರಾವಣ ಶನಿವಾರದ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಕಾರ್ಯ ಕೈಗೊಳ್ಳಲಾಗಿತ್ತು. ದೇವಸ್ಥಾನದ ಟ್ರಸ್ಟ್ ವತಿಯಿಂದ ಅಲಂಕಾರ ಕೆಲಸವನ್ನು ರಹ್ಮತ್ ಅವರಿಗೆ ವಹಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತ ದೀಪಗಳ ಅಲಂಕಾರ ಮಾಡುತ್ತಿದ್ದ ರಹ್ಮತ್, ಬಳಿಕ ದೇವಸ್ಥಾನದ ಗೋಪುರದ ಮೇಲೂ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ಅಲಂಕಾರ ಕಾರ್ಯ ಬಹುತೇಕ ಪೂರ್ಣಗೊಂಡು, ಕೊನೆಯ ಹಂತದ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಗೋಪುರದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ರಹ್ಮತ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ರಹ್ಮತ್ ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಅವರು ಕುಟುಂಬಕ್ಕೆ ಪ್ರಮುಖ ಆಧಾರವಾಗಿದ್ದರು. ರಹ್ಮತ್ ಅವರ ಅಕಾಲಿಕ ಸಾವಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಾರಿಗೆ BMW RR ಬೈಕ್‌ ಡಿಕ್ಕಿ – ಕಾರಲ್ಲಿದ್ದ ಯುವಕ ಸಾವು

Spread the loveಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ ಬಿಎಂಡಬ್ಲೂ ಆರ್‌ಆರ್ ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ  ಯುವಕ ಸಾವನ್ನಪ್ಪಿದ ಘಟನೆ ದೇವನಹಳ್ಳಿ  ತಾಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ