Breaking News

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರ 3.93 ಲಕ್ಷ ಕೋಟಿ ಕರಗಿದ್ದು ಯಾಕೆ?

Spread the love

ಮುಂಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ, ಕಚ್ಚಾ ತೈಲ ಬೆಲೆ ಏರಿಕೆ, ಸರ್ಕಾರ ನೀತಿಗಳಿಂದಾಗಿ ಷೇರು ಮಾರುಕಟ್ಟೆಯಲ್ಲಿ  ರಕ್ತಪಾತವಾಗಿದ್ದು ಹೂಡಿಕೆದಾರರ  3.93 ಲಕ್ಷ ಕೋಟಿ ಸಂಪತ್ತು ಇಂದು ಒಂದೇ ದಿನದಲ್ಲಿ ಕರಗಿದೆ.

ಬಾಂಬೆ ಷೇರು ಮಾರುಕಟ್ಟ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ) ಸೂಚಂಕ್ಯ ನಿಫ್ಟಿ, ಬ್ಯಾಂಕ್‌ ನಿಫ್ಟಿ ಅಂಕಗಳು ಭಾರೀ ಇಳಿಕೆಯಾಗಿದೆ.

ಸೆನ್ಸೆಕ್ಸ್‌ 1247.71(-1.67%) ಅಂಕ ಕುಸಿದು 73,580.54 ರಲ್ಲಿ ವ್ಯವಹಾರ ಮುಗಿಸಿದರೆ ನಿಫ್ಟಿ 383.70(-1.64%) ಅಂಕ ಕುಸಿದು 23,063.70 ರಲ್ಲಿ ಕೊನೆಯಾಯಿತು. ಬ್ಯಾಂಕ್‌ ನಿಫ್ಟಿ1,110.40(-1.96%) ಅಂಕ ಇಳಿಕೆಯಾಗಿ 55,438.50 ರಲ್ಲಿ ವ್ಯವಹಾರ ಮುಕ್ತಾಯಗೊಳಿಸಿತು.

ಮಾರುಕಟ್ಟೆ ಕುಸಿತಕ್ಕೆ ಕಾರಣ ಏನು?
1. ಅಮೆರಿಕ ಬಾಂಡ್ ಇಳುವರಿ ದಿಢೀರ್ ಏರಿಕೆ:
ಹೂಡಿಕೆದಾರರ ಪಾಲಿಗೆ ಅಮೆರಿಕದ ಖಜಾನೆ ಬಾಂಡ್ ಇಳುವರಿ ಏರಿಕೆಯಾಗಿರುವುದು ದೊಡ್ಡ ತಲೆನೋವಾಗಿದೆ. 10 ವರ್ಷಗಳ ಅಮೆರಿಕ ಬಾಂಡ್ ಇಳುವರಿಯು ಶೇ. 5.11ಕ್ಕೆ ಏರಿದ್ದು, ಇದು 2007ರ ಬಳಿಕ ದಾಖಲಾದ ಗರಿಷ್ಠ ಮಟ್ಟವಾಗಿದೆ.

ಅಮೆರಿಕದಲ್ಲಿ ವಾಣಿಜ್ಯ ಚಟುವಟಿಕೆಗಳು ಚೇತರಿಸಿಕೊಂಡಿರುವುದು ಇದಕ್ಕೆ ಕಾರಣ. ಇದರಿಂದಾಗಿ ಯುಎಸ್ ಫೆಡರಲ್ ರಿಸರ್ವ್ ದೀರ್ಘಾವಧಿಯವರೆಗೆ ಬಡ್ಡಿದರಗಳನ್ನು ಗರಿಷ್ಠ ಮಟ್ಟದಲ್ಲೇ ಮುಂದುವರಿಸಬಹುದು ಎಂಬ ಆತಂಕ ಹೆಚ್ಚಾಗಿದೆ. ಅಮೆರಿಕ ಬಾಂಡ್‌ಗಳ ಆಕರ್ಷಣೆ ಹೆಚ್ಚಾದಂತೆ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುವ ಒತ್ತಡ ಎದುರಾಗುತ್ತದೆ.

2. ಬಡ್ಡಿದರ ಏರಿಕೆಯ ಸಾಧ್ಯತೆಗಳು:
ಅಮೆರಿಕದ ಆರ್ಥಿಕತೆಯ ಸಕಾರಾತ್ಮಕ ಅಂಕಿಅಂಶಗಳ ಬೆನ್ನಲ್ಲೇ ಫೆಡರಲ್ ರಿಸರ್ವ್ ಅಕ್ಟೋಬರ್‌ನಲ್ಲಿ ಮತ್ತೆ ಬಡ್ಡಿದರ ಹೆಚ್ಚಿಸಬಹುದು ಎಂಬ ಊಹಾಪೋಹಗಳು ಶೇ. 66ಕ್ಕಿಂತ ಹೆಚ್ಚಿವೆ. ಬಡ್ಡಿದರಗಳು ದೀರ್ಘಕಾಲ ಏರಿಕೆಯ ಸ್ಥಿತಿಯಲ್ಲೇ ಉಳಿದರೆ, ಸಾಲದ ವೆಚ್ಚಗಳು ದುಬಾರಿಯಾಗುತ್ತದೆ.

3. ಬ್ಯಾರೆಲ್ ಕಚ್ಚಾ ತೈಲ ಬೆಲೆ ಏರಿಕೆ:
ಭಾರತೀಯ ಹೂಡಿಕೆದಾರರಿಗೆ ಕಚ್ಚಾ ತೈಲ ಬೆಲೆ ಗಗನಕ್ಕೇರಿರುವುದು ತಲೆನೋವಾಗಿ ಪರಿಣಮಿಸಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿ, ವಹಿವಾಟಿನಲ್ಲಿ 102 ರಿಂದ 106.14 ಡಾಲರ್‌ವರೆಗೆ ಏರಿಕೆಯಾಗಿದೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಕಚ್ಚಾ ತೈಲ ದರ ಏರಿಕೆಯು ದೇಶದ ಆಮದು ವೆಚ್ಚವನ್ನು ಹೆಚ್ಚಿಸಿ ಹಣದುಬ್ಬರ, ರೂಪಾಯಿ ಮೌಲ್ಯ ಹಾಗೂ ಕಂಪನಿಗಳ ಉತ್ಪಾದನಾ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ.

4. ಇರಾನ್-ಅಮೆರಿಕ ಬಿಕ್ಕಟ್ಟು:
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಭುಗಿಲೆದ್ದಿರುವ ಉದ್ವಿಗ್ನತೆಯು ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಭೀತಿ ಹುಟ್ಟಿಸಿದೆ. ಇದು ಪೂರೈಕೆಗೆ ಧಕ್ಕೆ ತಂದರೆ ಕಚ್ಚಾ ತೈಲ ಮತ್ತಷ್ಟು ದುಬಾರಿಯಾಗಲಿದ್ದು, ಆಮದು ಆಧಾರಿತ ಆರ್ಥಿಕತೆಗಳಿಗೆ ಭಾರೀ ಸಂಕಷ್ಟ ತರಲಿದೆ.

5. ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಿಗೆ ಹೊಡೆತ:
ವಿಮಾ ನಿಯಂತ್ರಣ ಪ್ರಾಧಿಕಾರವು ಕಮಿಷನ್ ಮತ್ತು ವಿತರಣಾ ಪಾವತಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಹಣಕಾಸು ಷೇರುಗಳು ತೀವ್ರ ಕುಸಿತ ಕಂಡವು. ಪಿಬಿ ಫಿನ್‌ಟೆಕ್ ಭಾರಿ ಕುಸಿತ ಕಂಡರೆ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾದವು. ಸೂಚ್ಯಂಕಗಳಲ್ಲಿ ಈ ವಲಯವು ಹೆಚ್ಚಿನ ಪಾಲು ಹೊಂದಿರುವುದರಿಂದ, ಇವುಗಳ ಪತನವು ಒಟ್ಟಾರೆ ಮಾರುಕಟ್ಟೆಯನ್ನು ಕೆಳಕ್ಕೆ ಎಳೆಯಿತು.


Spread the love

About Laxminews 24x7

Check Also

ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯಕ್ಕೆ ಮುಂದಾದ INDIA ಒಕ್ಕೂಟ

Spread the loveನವದೆಹಲಿ: ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹೊಸದಾಗಿ ಮಹಾಭಿಯೋಗ  ನಿರ್ಣಯ ಮಂಡಿಸಲು ಪ್ರತಿಪಕ್ಷಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ