ಹಾಸನ: ಬೇಲೂರು (Belur) ತಾಲೂಕಿನ ಕುಶಾವರ ಗ್ರಾಮದ ಬಳಿ ಕಾಡಾನೆ ದಾಳಿಗೆ ಆಡುಗಳನ್ನು ಮೇಯಿಸುತ್ತಿದ್ದ ಮಹಿಳೆ ಬಲಿಯಾಗಿದ್ದು, ಆನೆ ಹಾವಳಿಗೆ ಶಾಶ್ವತ ಪರಿಹಾರ ಸಿಗುವವರೆಗೂ ಗ್ರಾಮಸ್ಥರು ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಥಳಕ್ಕೆ ಮನವೊಲಿಸಲು ಬಂದ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್, ಸಂಸದ ಶ್ರೇಯಸ್ ಪಟೇಲ್ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಲ್ಲಿಯವರೆಗೂ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಂಸದರು ಹಾಗೂ ಶಾಸಕರ ಮನವಿಗೂ ಗ್ರಾಮಸ್ಥರು ಬಗ್ಗದೇ ಕುಳಿತಿದ್ದಾರೆ. ಪ್ರತಿಭಟನಾಕಾರರ ಜೊತೆಯಲ್ಲಿಯೇ ಶಾಸಕ ಹಾಗೂ ಸಂಸದರು ಸಹ ಕುಳಿತಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಿಂದಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಅವರು ಕರೆ ಮಾಡಿದ್ದಾರೆ. ಈ ವೇಳೆ ಸಿಎಂ, ರೈಲ್ವೆ ಬ್ಯಾರಿಕೇಡ್ ಹಾಕಲು ಕೂಡಲೇ ಸೂಚನೆ ಕೊಡುತ್ತೇನೆ. ಒಂದು ನಿಯೋಗದೊಂದಿಗೆ ಬೆಂಗಳೂರಿಗೆ ಬನ್ನಿ. ನಿಮ್ಮ ಬಳಿಗೆ ಅಧಿಕಾರಿಗಳನ್ನು ಕಳುಹಿಸಿ ಕೊಡುತ್ತೇನೆ. ಅತಿ ಶೀಘ್ರದಲ್ಲೇ ಸಭೆ ಮಾಡುತ್ತೇನೆ. ನನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದಿದ್ದಾರೆ.
ಸಂಬಂಧಪಟ್ಟ ಸಚಿವರು ಸಭೆಯಲ್ಲಿ ಇರುತ್ತಾರೆ. ನೀವು ಯಾವ ದಿನ ಸಭೆ ದಿನಾಂಕ ನಿಗದಿ ಮಾಡುತ್ತಿರೋ ಅವತ್ತೇ ಎಲ್ಲಾ ಅಧಿಕಾರಿಗಳೊಂದಿಗೆ ಬರುತ್ತೇನೆ. ಶಾಶ್ವತ ಪರಿಹಾರ ಕಲ್ಪಿಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಸಿಎಂ ಮನವಿಗೂ ಪಟ್ಟು ಸಡಿಲಿಸದ ಪ್ರತಿಭಟನಾಕಾರರು, ಕಾಡಾನೆ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಸ್ಥಳದಲ್ಲೇ ಸಿಸಿಎಫ್ ಏಡುಕುಂಡಲ, ಡಿಎಫ್ಓ ಹರೀಶ್ ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿಯವರು ಆಗಮಿಸಿದ್ದಾರೆ.
ಇದೇ ವೇಳೆ ಶೇಷಾದ್ರಿ ಎಂಬಾತ ಮಹಿಳೆಯ ಶವ ಎತ್ತಲು ಮುಂದಾಗಿದ್ದು, ಆತನ ವಿರುದ್ಧ ಪ್ರತಿಭಟನಾಕಾರರು ಮುಗಿಬಿದ್ದಿದ್ದಾರೆ. ನಿನ್ನದು ಜಗಬೋರನಹಳ್ಳಿ, ಇಲ್ಲಿಗೆ ಏಕೆ ಬಂದಿದ್ದೀಯಾ? ಮೊದಲು ನೀನು ಇಲ್ಲಿಂದ ಹೋಗು. ಸಮಸ್ಯೆ ನಿನಗೂ ಇದೆ, ಯಾರ ಮಾತು ಕೇಳಿ ಹೀಗೆ ಮಾಡುತ್ತಿದ್ದೀಯಾ ಎಂದು ಗಲಾಟೆ ಮಾಡಿದ್ದಾರೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
Laxmi News 24×7