ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ 48 ಗಂಟೆಗಳ ಗಡುವು ನೀಡಿದೆ. ನಿಗದಿತ ಅವಧಿಯಲ್ಲಿ ರಾಜೀನಾಮೆ ನೀಡದಿದ್ರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೀಪ್ಕೆ, 48 ಗಂಟೆಗಳ ಒಳಗೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಸಿಜೆಪಿ ದೇಶಾದ್ಯಂತ ಹೋರಾಟ ನಡೆಸಲಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯೋದಿಲ್ಲ ಎಂದು ಎಚ್ಚರಿಸಿದ್ದಾರೆ.
ಜ್ಞಾನೇಶ್ ಕುಮಾರ್ ದೇಶದ್ರೋಹಿ ಎಂದ ದೀಪ್ಕೆ
ಮುಂದುವರಿದು ಮಾತನಾಡದ ದೀಪ್ಕೆ ʻಎಸ್‌ಐರ್ ವಿಚಾರದಲ್ಲಿ ಚುನಾವಣಾ ಆಯೋಗದಲ್ಲೇ ಭಿನ್ನಮತ ಕುರಿತ ಇಂಡಿಯನ್ ಎಕ್ಸ್‌ಪ್ರೆಸ್ ವರದಿʼ ಉಲ್ಲೇಖಿಸಿ ಮಾತನಾಡಿದರು. ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ʻಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೇಶದ ಅತಿದೊಡ್ಡ ದೇಶದ್ರೋಹಿ, ದೇಶವಿರೋಧಿ ವ್ಯಕ್ತಿ ಎಂಬುದನ್ನ ಸಾಬೀತುಪಡಿಸುತ್ತದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಭಾರತದ ಪ್ರಜಾಪ್ರಭುತ್ವಕ್ಕೆ ಅವರಿಂದ ಅತ್ಯಂತ ದೊಡ್ಡ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ, ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾದ ಬಳಿಕ ಯಾರು ಮತ ಚಲಾಯಿಸಬೇಕು? ಯಾರು ಮತ ಚಲಾಯಿಸಬಾರದು ಎಂಬುದನ್ನ ಸರ್ಕಾರ ನಿರ್ಧರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
13 ಕೋಟಿಗೂ ಹೆಚ್ಚು ವೋಟ್‌ಗಳು ಡಿಲೀಟ್
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾತನಾಡಿದ ದೀಪ್ಕೆ, ಒಟ್ಟಾರೆ 13 ಕೋಟಿಗೂ ಹೆಚ್ಚು ಮತಗಳನ್ನ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಇದು ಸಣ್ಣ ಸಂಖ್ಯೆಯಲ್ಲ, 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಎನ್‌ಡಿಎ ನಡುವಿನ ಮತಗಳ ಅಂತರ ಕೇವಲ ಶೇ.2 ರಷ್ಟಿತ್ತು. 13 ಕೋಟಿ ಮತಗಳನ್ನ ಅಳಿಸುವುದು ಒಟ್ಟು ಮತಗಳ ಸುಮಾರು ಶೇ.13 ರಿಂದ 14 ರಷ್ಟನ್ನ ಅಳಿಸಿದಂತಾಗುತ್ತದೆ. ಆ ಶೇ.2ರಷ್ಟು ಮತಗಳ ಅಂತರವ ಹೆಚ್ಚಿಸಲು ಮತ್ತು ಬಿಜೆಪಿ ಇನ್ನೆಂದಿಗೂ ಅಧಿಕಾರ ಅಧಿಕಾರ ಕಳೆದುಕೊಳ್ಳದಂತೆ ಮಾಡಲು ಜ್ಞಾನೇಶ್ ಕುಮಾರ್ ಉದ್ದೇಶಪೂರ್ವಕವಾಗಿ ಮತಗಳನ್ನು ಡಿಲೀಟ್ ಮಾಡ್ತಿದ್ದಾರಾ? ಅಳಿಸುತ್ತಿದ್ದಾರೆಯೇ? ಇದನ್ನ ಏಕೆ ಮಾಡಲಾಗುತ್ತಿದೆ? ಇಷ್ಟೊಂದು ಮತಗಳನ್ನ ಅಳಿಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಒಂದೊಂದೇ ವಿಪಕ್ಷಗಳು ಟಾರ್ಗೆಟ್
2024ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾದ ಬಳಿಕ ಅವರಿಗೆ ಆತಂಕವಾಯಿತು. ಆಗ ದೇಶದ ಮನಸ್ಥಿತಿ ಬದಲಾಗುತ್ತಿದೆ ಮತ್ತು ಪ್ರಾದೇಶಿಕ ಶಕ್ತಿಗಳು ಬಲವಾಗಿ ಹೊರಹೊಮ್ಮುತ್ತಿವೆ ಎಂಬುದು ಅವರಿಗೆ ಅರಿವಾಯ್ತು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಎನ್‌ಸಿಪಿ, ಸ್ಟಾಲಿನ್, ಪಿಣರಾಯಿ ವಿಜಯನ್, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಾದೇಶಿಕ ನಾಯಕರನ್ನ ಒಂದೊಂದಾಗಿ ಗುರಿಯಾಗಿಸಿ ಸೋಲಿಸಲಾಯಿತು. ಇದು ಕೇವಲ ಕಾಕತಾಳೀಯವಾಗಲು ಸಾಧ್ಯವಿಲ್ಲ. ಸ್ಪಷ್ಟವಾದ ಒಂದು ಮಾದರಿ ಇದೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತಗಳನ್ನ ಅಳಿಸಲಾಗಿತ್ತು. ಆದ್ರೆ ಮಮತಾ ಬ್ಯಾನರ್ಜಿ ಸೋತಿರೋದು 15 ಸಾವಿರ ಮತಗಳ ಅಂತರದಲ್ಲಿ. ಅದೇ ರೀತಿ, ಎಂ.ಕೆ ಸ್ಟಾಲಿನ್ ಅವರ ಕ್ಷೇತ್ರದಲ್ಲಿ 1 ಲಕ್ಷ ಮತಗಳನ್ನ ಅಳಿಸಲಾಗಿತ್ತು, ಸ್ಟಾಲಿನ್ ಸುಮಾರು 45 ಸಾವಿರ ಮತಗಳ ಅಂತರದಲ್ಲಿ ಸೋತರು. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕ್ಷೇತ್ರದಲ್ಲಿ 40 ಸಾವಿರ ಮತಗಳನ್ನ ಅಳಿಸಲಾಗಿತ್ತು, ಅವರು 4 ರಿಂದ 5 ಸಾವಿರ ಮತಗಳ ಅಂತರದಲ್ಲಿ ಸೋತರು. ಇದೀಷ್ಟೇ ಅಲ್ಲ ಕೇರಳದಲ್ಲಿ ಮತಗಳ ಅಳಿಸುವಿಕೆಯಿಂದ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ ಎಂದು ದಾಖಲೆಗಳ ಸಮೇತ ಆರೋಪ ಮಾಡಿದರು.
CJP ಮುಂದಿಟ್ಟ ಪ್ರಮುಖ ಬೇಡಿಕೆಗಳೇನು?
* ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಲ್ಲದೆ, ಜ್ಞಾನೇಶ್ ಕುಮಾರ್‌ಗೆ ಆದೇಶ ನೀಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಬೇಕು.
* ಮುಂಬರುವ ಎಲ್ಲಾ ಚುನಾವಣೆಗಳನ್ನ ತಕ್ಷಣ ತಡೆಹಿಡಿಯಬೇಕು. SIR ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿ, 2025ರ ಜನವರಿಯ ಮತದಾರರ ಪಟ್ಟಿಗೆ ಹಿಂದಿರುಗಬೇಕು.
* SIRಗೆ ಸಂಬಂಧಿಸಿದ ಸಂಪೂರ್ಣ ನಿರ್ಧಾರ ಪ್ರಕ್ರಿಯೆ ಹಾಗೂ ಸಂಬಂಧಿತ ಕ್ರಮಗಳನ್ನು ಪರಿಶೀಲಿಸಲು ಸ್ವತಂತ್ರ ತನಿಖಾ ಆಯೋಗ ರಚಿಸಬೇಕು.
* ಮುಂದೆ ಚುನಾವಣಾ ಆಯೋಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕಡತಗಳು ನಾಶವಾಗಿದೆ ಅಥವಾ ಕಾಣೆಯಾಗಿವೆ ಅಂತಾ ಯಾರೊಬ್ಬರೂ ಹೇಳದಂತೆ ಎಲ್ಲಾ ದಾಖಲೆಗಳನ್ನ ಸುರಕ್ಷಿತವಾಗಿ ನ್ಯಾಯಾಲಯದ ವಶಕ್ಕೆ ತೆಗೆದುಕೊಳ್ಳಬೇಕು.
* ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನನ್ನ ರದ್ದುಪಡಿಸಿ, ನಾಗರಿಕ ಸಮಾಜದ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂತಹ ಹೊಸ ಕಾನೂನು ರೂಪಿಸಬೇಕು.
Laxmi News 24×7