ಬೆಂಗಳೂರು: ಮೇಕೆದಾಟು ಯೋಜನೆ ಆಗಬೇಕು ಅಂದ್ರೆ ಬಿಜೆಪಿ ಸರ್ಕಾರವೇ ಬರಬೇಕು. ಕೇಂದ್ರ ಸರ್ಕಾರ ಕೂಟ ಎಚ್ಚರಿಕೆ ನಡೆ ಇಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ, ಅಲ್ಲಿನ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನ ವಿರೋಧಿಸಿದೆ. ಮೇಕೆದಾಟು ಯೋಜನೆ ಆಗಬೇಕು ಅಂದ್ರೆ ಬಿಜೆಪಿ ಸರ್ಕಾರವೇ ಬರಬೇಕು. ಕಾಂಗ್ರೆಸ್‌ನವರು ಸುಮ್ನೆ ಬೊಗಳೆ ಬಿಟ್ಕೊಂಡು ನಾಟಕ ಆಡ್ತಿದ್ದಾರೆ ಎಂದು ತಿವಿದರು.
ವೋಟ್‌ಗಾಗಿ ಹೇಳೋದೊಂದು ಮಾಡೋದೊಂದು, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರೇ ಮೇಕೆದಾಟು ಕಾನೂನು ಬಾಹಿರ ಅಂದಿದ್ದಾರೆ. ಇಲ್ಲಿನ ಕಾಂಗ್ರೆಸ್ ಅಧ್ಯಕ್ಷರು ಮಾತಾಡಲಿ, ರಾಹುಲ್ ಗಾಂಧಿ ಮಾತಾಡಲಿ, ಎಲ್ಲಿದ್ದೀಯಪ್ಪ ರಾಹುಲ್ ಗಾಂಧಿ? ಅಲ್ಲಿ ಅಂಡಮಾನ್‌ಗೆ ಹೋಗಿ ಮರ ತಬ್ಕೋತೀರಲ್ಲ. ಮೇಕೆದಾಟನ್ನೂ ಒಮ್ಮೆ ತಬ್ಬಿಕೊಳ್ಳಿ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡ್ತಿದೆ, ಮೋಸ ಮಾಡ್ತಿದೆ. ಕಾಂಗ್ರೆಸ್ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದೆ. ಹಳೇ ಮೈಸೂರು ಜನ ಸುಮ್ನಿರಲ್ಲ, ನಿಮ್ಮ ಸರ್ಕಾರ ಕಿತ್ತು ಬಿಸಾಕ್ತಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸರಿಯಾಗಿ ಅಪ್ರೋಚ್ ಮಾಡಲಿ, ಅರಣ್ಯ ನಾಶ ಬಗ್ಗೆ ಪರಿಸರವಾದಿಗಳ ಕೂಗು ಇದೆ, ಹಾಗಾಗಿ ಕೇಂದ್ರ ಸುಮ್ಮನಿದೆ. ಕೇಂದ್ರ ಸರ್ಕಾರ ಎಚ್ಚರಿಕೆ ನಡೆ ಇಡುತ್ತಿದೆ. ಸರಿಯಾದ ಮಾಹಿತಿ, ದಾಖಲೆಗಳನ್ನ ಕೇಂದ್ರಕ್ಕೆ ಕೊಟ್ಟು ಅರಣ್ಯ ಜಾಗ ಕೊಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವೊಲಿಸಲಿ. ಆದ್ರೆ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸ್ತಿರೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಉಪಚುನಾವಣೆ ಟಿಕೆಟ್ ಬಿಜೆಪಿ ಅಭ್ಯರ್ಥಿಗೆ
ಇನ್ನೂ ಹಿರಿಯೂರು ಬೈಎಲೆಕ್ಷನ್ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿರಿಯೂರು ಉಪಚುನಾವಣೆ ಟಿಕೆಟ್ ಬಿಜೆಪಿ ಅಭ್ಯರ್ಥಿಗೇ ಅಂತ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿದೆ. ಇದರ ಬಗ್ಗೆ ಕುಮಾರಸ್ವಾಮಿ ಜೊತೆ ಮಾತಾಡ್ತೇವೆ, ನಾನೂ ಮಾತಾಡ್ತೇನೆ. ಅಂತಿಮವಾಗಿ ಕೇಂದ್ರದ ನಾಯಕರು ಜೆಡಿಎಸ್ ಮನವೊಲಿಸಿ ಬಿಜೆಪಿಗೇ ಟಿಕೆಟ್ ಕೊಡ್ತಾರೆಂಬ ವಿಶ್ವಾಸ ಇದೆ. ರಾಜ್ಯದಲ್ಲಿ ಬಿಜೆಪಿಗೇ ಹಿರಿಯೂರು ಟಿಕೆಟ್ ಅಂತ ನಾವು ತೀರ್ಮಾನ ಮಾಡಿದ್ದೇವೆ ಎಂದರು.
ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಜಿಪ, ತಾಪಂ ಚುನಾವಣೆಯಲ್ಲೂ ಹೊಂದಾಣಿಕೆ ಆಗಬೇಕು ಅಂತ ಹಲವರ ಅಭಿಪ್ರಾಯ ಇದೆ. ರಾಜ್ಯದಲ್ಲಿ ಒಂದೊಂದು ಕಡೆ ಒಂದೊಂದು ವಾತಾವರಣ ಇದೆ. ನಾವು ಸಮನ್ವಯ ಸಮಿತಿ ಸಭೆ ನಡೆಸ್ತೇವೆ. ಕಾರ್ಯಕರ್ತರ ಅಭಿಪ್ರಾಯಗಳ ಬಗ್ಗೆಯೂ ಚರ್ಚೆ ಮಾಡ್ತೇವೆ. ಅಂತಿಮವಾಗಿ ಕೇಂದ್ರದ ಬಿಜೆಪಿ ನಿರ್ಧಾರ ಏನಿರುತ್ತೋ ಅದಕ್ಕೆ ಬದ್ಧ ಎಂದು ಹೇಳಿದರು.
Laxmi News 24×7