Breaking News

ಕಾಂಗೋದಲ್ಲಿ ಚಿನ್ನದ ಗಣಿಯಲ್ಲಿ ಸತೀಶ್ ಜಾರಕಿಹೊಳಿ ಹೂಡಿಕೆ ಪತ್ತೆ: ಅಧಿಕೃತ ಪ್ರಕಟಣೆ ಹೊರಡಿಸಿದ ಇಡಿ* *PWD ಟೆಂಡರ್ ಲಂಚದ ಆರೋಪ

Spread the love

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯಲ್ಲಿ ಸಿಕ್ಕ ದಾಖಲೆಗಳ ಬಗ್ಗೆ ಇಡಿ ಪ್ರಕಟಣೆ ಹೋರಡಿಸಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ಸ್ವಗೃಹ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ತನಿಖಾಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದ್ದಾರೆ.

ಇದರೊಂದಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಮಗ ರಾಹುಲ್ ಜಾರಕಿಹೊಳಿ ಹಾಗೂ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸಚಿವರ ಭಾವ ಮೈದುನ ವೈ.ಡಿ. ಮಂಜುನಾಥ್ ಅವರ ಮನೆಗಳ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಇಡೀ ಕಾರ್ಯಾಚರಣೆಯ ಪ್ರಮುಖ ಭಾಗವಾಗಿ ‘ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಮೇಲೂ ಕಣ್ಣಿಡಲಾಗಿದ್ದು, ಪಿಡಬ್ಲ್ಯೂಡಿ ಇಲಾಖೆಯಿಂದ ಭಾರಿ ಮೊತ್ತದ ಗುತ್ತಿಗೆ ಹಾಗೂ ಟೆಂಡರ್‌ಗಳನ್ನು ಮಂಜೂರು ಮಾಡಿಸಿಕೊಳ್ಳುವ ಸಲುವಾಗಿ ಈ ಕಂಪನಿಯು ಭಾರಿ ಪ್ರಮಾಣದಲ್ಲಿ ಲಂಚ ನೀಡಿದೆ ಎಂದು ಇಡಿ ಅಧಿಕಾರಿಗಳು ಗಂಭೀರವಾಗಿ ಶಂಕಿಸಿದ್ದಾರೆ.

ಈ ರೀತಿ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ವಿದೇಶಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಕೇಂದ್ರೀಯ ತನಿಖಾ ಸಂಸ್ಥೆಯು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಸತೀಶ್ ಜಾರಕಿಹೊಳಿ ಅವರ ಸಹೋದರಿಯೂ ಆಗಿರುವ ಮಹಾದೇವಿ ಮಂಜುನಾಥ್ ಅಂದರೆ ವೈ.ಡಿ. ಮಂಜುನಾಥ್ ಅವರ ಪತ್ನಿ ಹೆಸರಿನಲ್ಲಿ ಆಫ್ರಿಕಾ ಖಂಡದ ಕಾಂಗೋ ದೇಶದ ‘ಎಲ್ಲೊರಾಡೊ ಮೈನಿಂಗ್ ರಿಸೋರ್ಸಸ್ ಹಾಗೂ ಜಾಂಬಿಯಾ ದೇಶದ ‘ನವ ಔರಮ್ ಮೈನಿಂಗ್ ಲಿಮಿಟೆಡ್‌’ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಭಾರೀ ಪ್ರಮಾಣದ ಷೇರುಗಳನ್ನು ಪಡೆದುಕೊಳ್ಳಲಾಗಿದೆ ಎಂಬ ಸ್ಪಷ್ಟ ಸುಳಿವು ಸಿಕ್ಕಿದೆ.

ವಿಶೇಷವಾಗಿ ಚಿನ್ನದ ಗಣಿಗಾರಿಕೆ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ ಕಾಂಗೋದ ‘ಮ್ಯಾಗ್ನಿಟ್ಯೂಡ್ ಸ್ಟಾರ್ ಎಸ್‌ಎಆರ್‌ಎಲ್’ ಕಂಪನಿಯಲ್ಲಿ ಸ್ವತಃ ಸತೀಶ್ ಜಾರಕಿಹೊಳಿ ಅವರೇ ಸುಮಾರು ಶೇಕಡಾ ನಾಲವತ್ತರಷ್ಟು ಬೃಹತ್ ಷೇರುಗಳನ್ನು ಹೊಂದಿದ್ದಾರೆ ಎಂಬ ಅಂಶವು ತನಿಖೆಯ ವೇಳೆ ಬಹಿರಂಗಗೊಂಡಿದೆ.

ಆಫ್ರಿಕಾ ರಾಷ್ಟ್ರಗಳಲ್ಲಿ ನಡೆದಿರುವ ಈ ಗಣಿಗಾರಿಕೆ ವ್ಯವಹಾರ ಹಾಗೂ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

ವಿವಿಧ ಸ್ಥಳಗಳಲ್ಲಿ ನಡೆಸಿದ ತಪಾಸಣೆಯ ವೇಳೆ ಲೆಕ್ಕಕ್ಕೆ ಸಿಗದ ಬರೋಬ್ಬರಿ ಮೂರೂವರೆ ಕೋಟಿ ರೂ.ಗೂ ಅಧಿಕ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಅಮೆರಿಕನ್ ಡಾಲರ್ ಹಾಗೂ ಯುರೋ ಮುಂತಾದ ವಿದೇಶಿ ಕರೆನ್ಸಿಗಳು ಸೇರಿದಂತೆ ಸುಮಾರು ಹದಿನೈದು ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅನಧಿಕೃತ ಹಾಗೂ ಅಕ್ರಮ ಮಾರ್ಗಗಳನ್ನು ಬಳಸಿ ಕಾಂಗೋ ದೇಶದ ಖಾಸಗಿ ಸಂಸ್ಥೆಯೊಂದರಲ್ಲಿ ಭಾರೀ ಪ್ರಮಾಣದ ನಗದು ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳು ಸಿಕ್ಕಿವೆ ಎಂದು ಇಡಿ ಸ್ಪಷ್ಟಪಡಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಮತ್ತು ಹಣಕಾಸು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಇ.ಡಿ. ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಒಟ್ಟು 21 ಸ್ಥಳಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಇ.ಡಿ. ಸೆಪ್ಟೆಂಬರ್ 11ರಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಎಲ್ಲೆಲ್ಲಿ ದಾಳಿ? ಯಾರಿಗೆ ಸಿಲುಕಿದ ಉರುಳು?

​ಬೆಂಗಳೂರು, ಬೆಳಗಾವಿ, ಗೋಕಾಕ ಹಾಗೂ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ಈ ದಾಳಿ ನಡೆಸಲಾಗಿದೆ.

  • ಕುಟುಂಬಸ್ಥರು: ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಅಳಿಯ ವೈ.ಡಿ. ಮಂಜುನಾಥ್.
  • ಆಪ್ತರು ಹಾಗೂ ಸಿಬ್ಬಂದಿ: ಸಚಿವರ OSD ಹಾಗೂ PA ಮಲಗೌಡ (ಮಾಲಗೌಡ) ಪಾಟೀಲ, ರಾಜು ದೇಬರ್ಶೆಟ್ಟಿ (ದರಗಟ್ಟಿ), ವಿಠ್ಠಲ ಪರಸನ್ನವರ ಮತ್ತು ಡಾ. ಗಿರೀಶ್ ಸೋನವಾಲ್ಕರ್.
  • ಮುಖ್ಯ ಸ್ಥಳಗಳು: ಸಚಿವರ ಗೋಕಾಕ ನಿವಾಸ, ಬೆಂಗಳೂರಿನ ಡಾಲರ್ಸ್ ಕಾಲೊನಿ ಮನೆ ಹಾಗೂ ಕ್ರೆಸೆಂಟ್ ರಸ್ತೆಯ ಕಚೇರಿ-ನಿವಾಸ.

ಇ.ಡಿ. ಕಾರ್ಯಾಚರಣೆಯಲ್ಲಿ ಪತ್ತೆಯಾದ ಪ್ರಮುಖ ಅಂಶಗಳು:

1. ಕಾಂಗೋದಲ್ಲಿ ಚಿನ್ನದ ಗಣಿ ಹಾಗೂ ವಿದೇಶಿ ಹೂಡಿಕೆ:

ಜಾರಕಿಹೊಳಿ ಕುಟುಂಬದ ಸದಸ್ಯರು ಆಫ್ರಿಕಾದ ಕಾಂಗೋ ಮತ್ತು ಜಾಂಬಿಯಾದಲ್ಲಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿರುವ ‘M/s Magnitude Star SARL’ ಎಂಬ ಚಿನ್ನದ ಗಣಿಗಾರಿಕೆ ಸಂಸ್ಥೆಯಲ್ಲಿ ಸುಮಾರು 40% ಪಾಲು ಹೊಂದಿದ್ದಾರೆ ಎಂದು ಇ.ಡಿ. ತಿಳಿಸಿದೆ. ಇದರೊಂದಿಗೆ M/s Eldorado Mining Resources (ಕಾಂಗೋ) ಹಾಗೂ M/s Nava Aurum Mining Ltd (ಜಾಂಬಿಯಾ) ಕಂಪನಿಗಳಲ್ಲೂ ಕುಟುಂಬದವರ ಷೇರುಗಳು ಪತ್ತೆಯಾಗಿವೆ.

2. ₹3.3 ಕೋಟಿ ನಗದು ಹಾಗೂ ವಿದೇಶಿ ಕರೆನ್ಸಿ ಜಪ್ತಿ:

ಶೋಧದ ವೇಳೆ ಲೆಕ್ಕಕ್ಕೆ ತೋರಿಸದ ₹3.3 ಕೋಟಿ ಭಾರತೀಯ ನಗದು ಮತ್ತು ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಹಾಗೂ ಯುರೋ ಸೇರಿದಂತೆ ವಿದೇಶಿ ಕರೆನ್ಸಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬ್ಯಾಂಕಿಂಗ್ ಮಾರ್ಗವಲ್ಲದೆ ನಗದು ರೂಪದಲ್ಲಿ ಅಕ್ರಮವಾಗಿ ವಿದೇಶಕ್ಕೆ ಹಣ ವರ್ಗಾಯಿಸಿ ಹೂಡಿಕೆ ಮಾಡಿರುವ ಸಾಕ್ಷ್ಯಗಳೂ ಲಭ್ಯವಾಗಿವೆ.

3. PWD ಟೆಂಡರ್ ಲಂಚದ ಆರೋಪ:

ಖಾಸಗಿ ಕಂಪನಿಯಾದ ‘M/s Bharat Vanijya Eastern Private Ltd (BVEPL)’ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯಲು ಭಾರಿ ಮೊತ್ತದ ಲಂಚ ನೀಡಿದೆ. ಈ ಹಣವನ್ನು ವಿದೇಶದಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ BVEPL ಸಂಸ್ಥೆಯ ಮಾಲೀಕರ ಕಚೇರಿ ಮತ್ತು ನಿವಾಸಗಳ ಮೇಲೆಯೂ ದಾಳಿ ನಡೆದಿದೆ.

ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷಿ ವಶ

​PWD ಇಲಾಖೆಯ ಗುತ್ತಿಗೆದಾರರಿಂದ ಲಂಚ ಸಂಗ್ರಹಿಸಿರುವ ದಾಖಲೆಗಳು, ವೈ.ಡಿ. ಮಂಜುನಾಥ್ ನಿಯಂತ್ರಣದಲ್ಲಿರುವ ಸಂಸ್ಥೆಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಸಾಕ್ಷ್ಯಗಳು ಹಾಗೂ ಪ್ರಭಾವಿ ವ್ಯಕ್ತಿಗಳ ವಹಿವಾಟಿಗೆ ಸಂಬಂಧಿಸಿದ ಡಿಜಿಟಲ್ ಸಾಧನಗಳನ್ನು ಇ.ಡಿ. ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ತೀವ್ರವಾಗಿ ಮುಂದುವರಿದಿದೆ.


Spread the love

About Laxminews 24x7

Check Also

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the loveನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ