ಕೊಪ್ಪಳ: ಹನುಮ ಜನ್ಮ ಸ್ಥಳ ಗಂಗಾವತಿಯ ಅಂಜನಾದ್ರಿ ದೇವಸ್ಥಾನ ವಿಚಾರವಾಗಿ ಅರ್ಚಕ ವಿದ್ಯಾದಾಸ್ ಬಾಬಾ ಹಾಗೂ ಕೊಪ್ಪಳ ಜಿಲ್ಲಾಡಳಿತದ ನಡುವೆ ಜಟಾಪಟಿ ಮುಂದುವರಿದಿದೆ.
ಅಂಜನಾದ್ರಿ ದೇವಸ್ಥಾನ ಮತ್ತೆ ಜಿಲ್ಲಾಡಳಿತದ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ವಿದ್ಯಾದಾಸ್ ಬಾಬಾ ಹಾಕಿದ್ದ ಬೀಗ ಒಡೆದು ಜಿಲ್ಲಾಡಳಿತದ ಅಧಿಕಾರಿಗಳು ಪ್ರವೇಶ ಮಾಡಿದ್ದಾರೆ. ದೇವಸ್ಥಾನದ 8 ಕಚೇರಿಗಳಿಗೆ ಬಾಬಾ ಹಾಕಿದ್ದ ಬೀಗಗಳನ್ನು ಎಸಿ, ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳು ಒಡೆದಿದ್ದಾರೆ.
ಬೆಟ್ಟದಲ್ಲಿ ಬಾಬಾ ಅಳವಡಿಸಿದ ಟ್ರಸ್ಟ್ನ ಬ್ಯಾನರ್ಗಳನ್ನೂ ತೆರವು ಮಾಡಿದ್ದಾರೆ. ಅಲ್ಲದೆ, ಬಾಬಾ ನೇಮಕ ಮಾಡಿಕೊಂಡ ಸಿಬ್ಬಂದಿಯನ್ನೂ ಹೊರ ಕಳಿಸಿ, ಜಿಲ್ಲಾಡಳಿತ ಸಿಬ್ಬಂದಿ ಕಾರ್ಯನಿರ್ವಹಣೆಗೆ ಎಸಿ ಸೂಚಿಸಿದ್ದಾರೆ. ಜಿಲ್ಲಾಡಳಿತದ ಕ್ರಮಕ್ಕೆ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶದಂತೆ ದೇವಸ್ಥಾನ ಸುಪರ್ದಿಗೆ ಪಡೆದುಕೊಂಡಿದ್ದೇನೆ. ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮೊದಲು ನಿಮ್ಮ ಕೋರ್ಟ್ ಆದೇಶ ತೋರಿಸಿ, ಆಮೇಲೆ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಈ ವೇಳೆ, ಬಾಬಾ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸೋದಾಗಿ ಬಾಬಾ ಹೇಳಿದ್ದಾರೆ.
Laxmi News 24×7