ಮೈಸೂರು: ಅರಮನೆ, ಅಂಬಾರಿ ವಿಚಾರದಲ್ಲಿ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಅರಮನೆ ಸರ್ಕಾರದ ಆಸ್ತಿ ಎಂಬ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೆ ಕೆಲವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ತಪ್ಪು ಮಾಡಿದ್ದರೆ ಕ್ಷಮೆ ಕೇಳಬಹುದಿತ್ತು. ಆದರೆ ತಪ್ಪೇ ಮಾಡದಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜಮನೆತನದವರೊಂದಿಗೆ ಮುಖ್ಯಮಂತ್ರಿಗಳೇ ಮಾತನಾಡುವುದಾಗಿ ಹೇಳಿದ್ದಾರೆ. ಹೀಗಾಗಿ ನಾನು ಪ್ರತ್ಯೇಕವಾಗಿ ಹೋಗಿ ಮಾತನಾಡುವ ಅಗತ್ಯವಿಲ್ಲ. ಅರಮನೆ ಸ್ವಾಧೀನ ಕಾಯ್ದೆಯ ಪ್ರಕಾರವೇ ನಾನು ಮಾತನಾಡಿದ್ದೇನೆ. ಅರಮನೆ ಮತ್ತು ಅಂಬಾರಿ ವಿಚಾರದಲ್ಲಿ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ನಡೆಸುವಂತೆ ಹಾಗೂ ಅಂಬಾರಿ ನೀಡುವುದಿಲ್ಲ ಎಂದು ಪತ್ರ ಬರೆಯಲಾಗಿತ್ತು. ಆ ಪತ್ರಕ್ಕೆ ಪ್ರತಿಕ್ರಿಯೆಯಾಗಿ ನಾನು ಮಾತನಾಡಿದ್ದೇನೆ. ಅಂಬಾರಿ ಇಲ್ಲದೇ ಜಂಬೂಸವಾರಿ ನಡೆಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಈಗ ಇರುವುದು ಜನರ ಸರ್ಕಾರ. ಜನರಿಗಾಗಿ ನಾವು ದಸರಾ ಆಚರಿಸುತ್ತೇವೆ. ಅರಮನೆ ಮತ್ತು ಅಂಬಾರಿ ವಿಚಾರದಲ್ಲಿ ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ಅವರು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಪ್ರತಿಭಟನೆ ಕೈ ಬಿಡುವಂತೆ ಪ್ರಮೋದಾದೇವಿ ಒಡೆಯರ್ ಮನವಿ:
ಇನ್ನೂ ರಾಜಮನೆತನ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ, ಮೈಸೂರಿನಲ್ಲಿ ನಾಳೆ ಆಯೋಜನೆ ಆಗಿರುವ ಪ್ರತಿಭಟನೆ ಕೈ ಬಿಡುವಂತೆ ಪ್ರಮೋದಾದೇವಿ ಒಡೆಯರ್ (Pramoda Devi) ಪ್ರತಿಭಟನೆ ಸಂಘಟಕರಿಗೆ ಮನವಿ ಮಾಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚಿನ ಬೆಳವಣಿಗೆ ಹಿನ್ನೆಲೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತು, ಒಗ್ಗಟ್ಟು ಪ್ರದರ್ಶಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ವಿಚಾರಗಳು ತಿಳಿಯಾಗಲು ಅವಕಾಶ ನೀಡಬೇಕಿದೆ. ಈ ವಿಚಾರವನ್ನು ಮತ್ತಷ್ಟು ಉಲ್ಬಣಗೊಳಿಸುವ ಅಥವಾ ರಾಜಕೀಯಗೊಳಿಸುವ ಪ್ರಯತ್ನಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಇದರಿಂದ ಶಾಂತವಾಗಿ ಮತ್ತು ವಿವೇಚನೆಯಿಂದ ಪ್ರತಿಕ್ರಿಯೆ ನೀಡುವ ಅಗತ್ಯವಿದೆ. ಯಾವುದೇ ತಪ್ಪು ತಿಳಿವಳಿಕೆಗಳಿದ್ದರೂ, ಪರಸ್ಪರ ಮಾತುಕತೆ ಮತ್ತು ತಿಳಿವಳಿಕೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು ಎಂಬುದು ಅವರ ನಿಲುವಾಗಿದೆ. ಈ ಹಿನ್ನೆಲೆ ಪ್ರಸ್ತಾಪಿತ ಪ್ರತಿಭಟನೆಯನ್ನು ಹಿಂಪಡೆಯುವುದು ಸೂಕ್ತ ಎಂದಿದ್ದಾರೆ.
ಪ್ರಸ್ತುತ ಬೆಳವಣಿಗೆಗಳ ಬಿಸಿ ತಣ್ಣಗಾದ ಬಳಿಕ, ಸಾರ್ವಜನಿಕರ ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿರುವ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಈ ವಿಚಾರದ ಕುರಿತು ತಮ್ಮ ನಿಲುವನ್ನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Laxmi News 24×7