ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.
ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ ಮರಳುವ ಕುರಿತು ಖಚಿತತೆ ಇಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಬಿಸಿಸಿಐ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಟೂರ್ನಿ ಆಯೋಜಿಸಲು ಬೇರೆ ಬೇರೆ ಮಾರ್ಗಗಳತ್ತ ಚಿಂತನೆ ನಡೆಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.
ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್, ಟೂರ್ನಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದರೆ ಅದು ಆರ್ ಸಿಬಿಗೆ ನೆರವಾಗಲಿದೆ. ಒಂದೊಮ್ಮೆ ಐಪಿಎಲ್ ವಿದೇಶಿ ನೆಲದಲ್ಲಿ ನಡೆದರೆ ತಂಡಕ್ಕೆ ತುಂಬಾ ಸಂತೋಷವಾಗುತ್ತದೆ. ಆರ್‌ಸಿಬಿ ಮಾತ್ರವಲ್ಲದೇ ಇದು ಹಲವು ತಂಡಗಳಿಗೆ ಸಹಕಾರಿ ಆಗಲಿದೆ. ಏಕೆಂದರೆ ನಮ್ಮ ತಂಡದಲ್ಲಿ ಎರಡು ದೇಶದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೆಚ್ಚಿಸುತ್ತದೆ ಎಂದಿದ್ದಾರೆ. ಅಲ್ಲದೇ 2020ರ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ತಂಡದಲ್ಲಿ ಎಬಿ ಡಿಲಿಯರ್ಸ್ (ದಕ್ಷಿಣ ಆಫ್ರಿಕಾ), ಅರೋನ್ ಫಿಂಚ್ (ಆಸ್ಟ್ರೇಲಿಯಾ), ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)ದ ವಿದೇಶಿ ಆಟಗಾರರು ಇದ್ದಾರೆ. ಈಗಾಗಲೇ 2020ರ ಐಪಿಎಲ್ ಟೂರ್ನಿ ಆಯೋಜಿಸಲು ತಾವು ಸಿದ್ಧರಾಗಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಆಯೋಜಿಸುವ ಅವಕಾಶವನ್ನು ಯಾವುದೇ ದೇಶ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಈ ರೇಸ್‍ನಲ್ಲಿದೆ ಎನ್ನಲಾಗಿದೆ. 2009ರಲ್ಲಿ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೇ 2014ರ ಟೂರ್ನಿಯ ಕೆಲ ಪಂದ್ಯಗಳು ಯುಎಇನಲ್ಲಿ ನಡೆಸಲಾಗಿತ್ತು.