Breaking News
Home / ಅಂತರಾಷ್ಟ್ರೀಯ / 20 ಯೋಧರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ: ರಾಜನಾಥ್‍ಸಿಂಗ್

20 ಯೋಧರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ: ರಾಜನಾಥ್‍ಸಿಂಗ್

Spread the love

ನವದೆಹಲಿ, ಜೂ.17- ಭಾರತದ ವಿರುದ್ಧ ಕಾಲುಕೆರೆದು ಸಂಘರ್ಷ ಉಂಟುಮಾಡಿದ್ದಲ್ಲದೆ 20 ಯೋಧರನ್ನು ಹತ್ಯೆ ಮಾಡಿರುವ ಪ್ರತೀಕಾರಕ್ಕೆ ಭಾರತ ಸನ್ನದ್ಧವಾಗಿದ್ದು, ಸೈನಿಕರ ತ್ಯಾಗವನ್ನು ಮರೆಯುವುದಿಲ್ಲ ಎನ್ನುವ ಮೂಲಕ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

20 ಯೋಧರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ. ಸೈನಿಕರ ಸಾವು ಅತ್ಯಂತ ನೋವು ತಂದಿದೆ. ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಪರೋಕ್ಷವಾಗಿ ಚೀನಾ ರಾಷ್ಟ್ರವನ್ನು ಉಲ್ಲೇಖಿಸದೆ ಭಾರತ ಸಮರಕ್ಕೆ ಸಿದ್ಧ ಎಂಬ ಕಠಿಣ ಸಂದೇಶವನ್ನು ಮುಟ್ಟಿಸಿದ್ದಾರೆ.

ಘಟನೆ ನಡೆದ ಬಳಿಕ ಇಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, 20 ಸೈನಿಕರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಘಟನೆ ನನಗೆ ಮಾತ್ರವಲ್ಲದೆ ಇಡೀ ರಾಷ್ಟ್ರದ ಆಸ್ಮಿತೆಯನ್ನೇ ಕೆಣಕುವಂತೆ ಮಾಡಿದೆ. ಯೋಧರ ಕುಟುಂಬದ ಜತೆ ಇಡೀ ರಾಷ್ಟ್ರ ಇದೆ ಎಂದು ಅಭಯ ನೀಡಿದರು.

ಇದಕ್ಕೂ ಮುನ್ನ ರಾಜನಾಥ್‍ಸಿಂಗ್ ಅವರು ಮೂರು ಸೇನಾಪಡೆಗಳ ಮುಖ್ಯಸ್ಥರು ಹಾಗೂ ಇತರೆ ಪಡೆಗಳ ಜತೆ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಿದರು. ಭೂ ಸೇನೆ, ವಾಯುದಳ ಹಾಗೂ ನೌಕಾದಳದ ಮುಖ್ಯಸ್ಥರು ಮತ್ತು ಮೂರೂ ದಳದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಮೂಲಗಳ ಪ್ರಕಾರ, ಲಡಾಖ್‍ನ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಸೇನಾಪಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪದೇ ಪದೇ ಚೀನಾ ಗಡಿ ಕ್ಯಾತೆ ತೆಗೆದು ನಮ್ಮ ಮೇಲೆ ಸವಾರಿ ಮಾಡಲು ಹೊರಟಿದೆ. ಈ ಬಾರಿ ಅವರಿಗೆ ಸರಿಯಾದ ಪಾಠ ಕಲಿಸಲೇಬೇಕು, ಇದಕ್ಕಾಗಿ ಮೂರೂ ಪಡೆಗಳು ಸರ್ವಸನ್ನದ್ಧರಾಗಬೇಕೆಂದು ರಾಜನಾಥ್‍ಸಿಂಗ್ ಸೂಚನೆ ಕೊಟ್ಟರು ಎಂದು ತಿಳಿದುಬಂದಿದೆ.

ಭಾರತ ಶಾಂತಿಪ್ರಿಯ ರಾಷ್ಟ್ರ. ನೆರೆಯ ರಾಷ್ಟ್ರಗಳ ಜತೆ ನಾವು ಈಗಲೂ ಅನ್ಯೋನ್ಯತೆಯಿಂದ ಇರಲು ಬಯಸುತ್ತೇವೆ. ಒಂದು ಕಡೆ ಸೌಹಾರ್ದಯುತ ಮಾತಿಗೆ ಆಹ್ವಾನಿಸಿ ಮತ್ತೊಂದು ಕಡೆ ಸೈನಿಕರನ್ನು ಮೋಸದಿಂದ ಕೊಂದಿದೆ.

ಈ ಬಾರಿ ನಾವು ಸುಮ್ಮನಿದ್ದರೆ ಡ್ರ್ಯಾಗನ್ ರಾಷ್ಟ್ರ ಮತ್ತೆ ಕ್ಯಾತೆ ತೆಗೆಯಲಿದೆ. ಭವಿಷ್ಯದಲ್ಲಿ ಇನ್ನೆಂದೂ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ ಎಂದು ರಕ್ಷಣಾ ಸಚಿವರು ಸೂಚಿಸಿದ್ದಾರೆ.

ರಕ್ಷಣಾ ಸಚಿವರಿಂದ ಸೂಚನೆ ಬರುತ್ತಿದ್ದಂತೆ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಭಯ ರಾಷ್ಟ್ರಗಳ ನಡುವೆ ಸುಮಾರು 3 ರಿಂದ 4 ಸಾವಿರ ಕಿಲೋ ಮೀಟರ್ ಗಡಿ ಹೊಂದಿದೆ.

ಹಿಮಾಚಲ ಪ್ರದೇಶ, ಉತ್ತರಖಂಡ, ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಮಿಜೋರಾಂ ಸೇರಿದಂತೆ ಈಶಾನ್ಯ ರಾಷ್ಟ್ರಗಳ ಗಡಿಯಲ್ಲಿ ಸೇನೆಯನ್ನು ಕಾವಲಿಗೆ ನಿಯೋಜಿಸಲಾಗಿದೆ.

ಮೂಲಗಳ ಪ್ರಕಾರ, ಕಳೆದ ರಾತ್ರಿಯಿಂದಲೇ ಗಡಿ ಪ್ರದೇಶಕ್ಕೆ ಹೆಚ್ಚಿನ ಸೇನೆಯನ್ನು ನಿಯೋಜಿಸಲಾಗಿದೆ. ಬಿಎಸ್‍ಎಫ್, ಐಟಿಬಿಪಿ, ಸಿಐಎಸ್‍ಎಫ್, ಸಿಆರ್‍ಪಿಎಫ್ ಸೇರಿದಂತೆ ವಿವಿಧ ಶ್ರೇಣಿಯ ಸೇನೆಯನ್ನು ಗಡಿಯತ್ತ ನಿಯೋಜನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಹವಣಿಸುತ್ತಿದ್ದು, ಯಾವುದೇ ಸಂದರ್ಭದಲ್ಲೂ ನೆರೆ ರಾಷ್ಟ್ರದ ಮೇಲೆ ಮುಗಿಬೀಳುವ ಲಕ್ಷಣಗಳು ಗೋಚರಿಸಿವೆ. ಸದ್ಯ ಗ್ವಾಲನ್ ಗಡಿಭಾಗದಿಂದ ಎರಡೂ ರಾಷ್ಟ್ರಗಳ ಸೇನೆ ಸುಮಾರು 2 ರಿಂದ 3 ಕಿಮೀ ದೂರದವರೆಗೆ ಹಿಂದೆ ಸರಿದಿದೆ.

ಆದರೆ, ಚೀನಾ ಪರಿಸ್ಥಿತಿ ನೋಡಿಕೊಂಡು ದಾಳಿ ನಡೆಸುವ ಸಂಭವವಿರುವುದರಿಂದ ಭಾರತ ಕೂಡ ಎದುರೇಟು ನೀಡಲು ಸಜ್ಜಾಗಿದೆ. ಈಗಾಗಲೇ ಗ್ವಾಲನ್ ಗಡಿಯಲ್ಲಿ ಆಧುನಿಕ ಯುದ್ಧೋಪಕರಣಗಳನ್ನು ಪೂರೈಕೆ ಮಾಡಲಾಗಿದೆ.


Spread the love

About Laxminews 24x7

Check Also

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಬಿಗ್ ಶಾಕ್ :ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

Spread the loveಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಲ್ಬುರ್ಗಿ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಲಿಕಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ