ವಾಷಿಂಗ್ಟನ್: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಭಾಷಣಕ್ಕೆ ಭಾರತದ ತಿರುಗೇಟು ನೀಡಿದ್ದು, ಭಯೋತ್ಪಾದನೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗಹ್ಲೋಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಶೆಹಬಾಜ್ ಶರೀಫ್ ಭಾರತದ ವಿರುದ್ಧ ಮಾಡಿದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಖಂಡಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಕುರಿತ ಪಾಕಿಸ್ತಾನದ ಪ್ರಸ್ತಾಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ. ಭಾರತ ತನ್ನ ರಕ್ಷಣೆಗೆ ಎಂದಿಗೂ ಬದ್ಧವಾಗಿದ್ದು, ಪಾಕಿಸ್ತಾನದ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಪ್ರತಿನಿಧಿಗಳು ವರ್ಷದಿಂದ ವರ್ಷಕ್ಕೆ ಒಂದೇ ಸುಳ್ಳನ್ನು ಪುನರಾವರ್ತಿಸಿದರೆ ಅದು ಸತ್ಯವಾಗುವುದಿಲ್ಲ. ಆ ದೇಶದ ಭಯೋತ್ಪಾದನೆ, ವಂಚನೆ ಮತ್ತು ದ್ವಂದ್ವ ನೀತಿಗಳು ಜಗತ್ತಿಗಾಗಲಿ ಅಥವಾ ಸ್ವತಃ ಪಾಕಿಸ್ತಾನಕ್ಕಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪಾಕ್ ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಧೋರಣೆಯನ್ನು ಪ್ರಶ್ನಿಸಿ, ಆ ದೇಶದ 27ನೇ ಸಂವಿಧಾನ ತಿದ್ದುಪಡಿ ಹಾಗೂ ಅಲ್ಲಿನ ನಿಜವಾದ ಆಡಳಿತಗಾರನಿಗೆ ನೀಡಲಾಗಿರುವ ಜೀವಾವಧಿ ವಿನಾಯಿತಿಯ ಬಗ್ಗೆಯೂ ಟೀಕಿಸಿದ್ದಾರೆ.
ಧರ್ಮ ಸಹಿಷ್ಣುತೆಯ ಬಗ್ಗೆ ಭಾರತದ ವಿರುದ್ಧ ಟೀಕೆ ಮಾಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಇತರ ಕಾನೂನುಗಳ ಬಗ್ಗೆ ವಿಶ್ವಕ್ಕೆ ಗೊತ್ತಿದೆ. ಅಲ್ಲದೇ ವಿಶ್ವದಲ್ಲೇ ಭಯೋತ್ಪಾದನೆಯನ್ನು ಹರಡುವಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ನೆಲೆಯ ಸಮೀಪವೇ ಆಶ್ರಯ ಪಡೆದಿದ್ದ. ಪಾಕಿಸ್ತಾನದ ಈ ಟೀಕೆಗಳು ಸಂಪೂರ್ಣವಾಗಿ ಅಸಂಬದ್ಧ ಮತ್ತು ಕಪಟತನದಿಂದ ಕೂಡಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Laxmi News 24×7