Breaking News

ಸುವರ್ಣಸೌಧದ ಮುಂದೆ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣ

Spread the love

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿದರು.‌

ಕಲಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದಕುಮಾರ್ ರೇವಪ್ಪ ಬಮ್ಮನ್ ಕುಟುಂಬಸ್ಥರು ವಿಶೇಷ ಆಸಕ್ತಿಯಿಂದ ತಯಾರು ಮಾಡಿಸಿರುವ 75 ಅಡಿ ಉದ್ದ, 50 ಅಡಿ ಅಗಲ ಗಾತ್ರದ ಈ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಬೃಹದಾಕಾರದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಯು. ಟಿ. ಖಾದರ್ ಬಹಳ ಉತ್ತಮ‌ ಕೆಲಸ ಮಾಡಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜ ಪ್ರದರ್ಶನಕ್ಕೆ ಕಾರಣೀಕರ್ತರಾಗಿದ್ದಾರೆ. ಇದನ್ನು ಮಾಡಿರುವ ವಿನೋದ ಬಮ್ಮನ್ ಕುಟುಂಬಸ್ಥರಿಗೆ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ಸ್ವಾತಂತ್ರ್ಯ ಚಳವಳಿಯಲ್ಲಿ ತ್ರಿವರ್ಣ ಧ್ವಜ ಜಾರಿಗೆ ತಂದರು. ಹಾಗಾಗಿ, ಇದು ಕೇವಲ ಖಾದಿ ವಸ್ತ್ರ ಅಲ್ಲ. ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಮೂರು ವರ್ಣಗಳಲ್ಲಿ ಕೇಸರಿ ತ್ಯಾಗದ ಸಂಕೇತ, ಬಿಳಿ ಬಣ್ಣ ಶಾಂತಿ ಮತ್ತು ಸತ್ಯ. ಹಸಿರು ಸಮೃದ್ಧಿ ಪ್ರತಿನಿಧಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ಆರ್ಥಿಕ ಅಭಿವೃದ್ಧಿ ಮತ್ತು ಸಮಾನತೆ ಸೂಚಿಸುತ್ತದೆ. ಇವೆಲ್ಲವೂ ರಾಷ್ಟ್ರಭಕ್ತಿ ಸಾರುತ್ತವೆ ಎಂದು ತಿಳಿಸಿದರು.

ಎಲ್ಲರನ್ನೂ ಮನುಷ್ಯರಾಗಿ ನೋಡಬೇಕು: ತ್ರಿವರ್ಣ ಧ್ವಜ ಗೌರವಿಸಬೇಕು. ಹೆಮ್ಮೆಯಿಂದ ನೋಡಬೇಕು. ರಾಷ್ಟ್ರಪ್ರೇಮ ಎಲ್ಲರೂ ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕೆ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಬೇಕು. ನಮ್ಮಲ್ಲಿ ಅನೇಕ ಜಾತಿ, ಧರ್ಮಗಳಿವೆ. ಎಲ್ಲರೂ ಜ್ಯಾತ್ಯತೀತ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಮನುಷ್ಯರನ್ನಾಗಿ ನೋಡಬೇಕು. ಅಂದಾಗ ಮಾತ್ರ ಸಮಸಮಾಜದ ಪರಿಕಲ್ಪನೆ ಕಾಣಲು ಸಾಧ್ಯ. ಎಷ್ಟರ ಮಟ್ಟಿಗೆ ಭ್ರಾತೃತ್ವ ಭಾವನೆ ಬೆಳೆಸಿಕೊಂಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೇಶಪ್ರೇಮ ಬೆಳೆಸಿಕೊಳ್ಳದಿದ್ದರೆ ಮನುಷ್ಯರಾಗಿ ಬದುಕುವುದು ಕಷ್ಟ ಆಗುತ್ತದೆ. ವಿಶೇಷವಾಗಿ ಯುವಕ, ಯುವತಿಯರು, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಪ್ರತಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸಲು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ