ನಮ್ಮ ಕ್ಷೇತ್ರದ ಹೆಮ್ಮೆ ಮಹಾತ್ಮಾ ಗಾಂಧೀ – ಗಂಗಾಧರರಾವ್ ಸ್ಮಾರಕ ಭವನಕ್ಕೆ ಇಂದು ಭೇಟಿ ನೀಡಿ, 1937ರಲ್ಲಿ ಹುದಲಿ ಗ್ರಾಮಕ್ಕೆ ಆಗಮಿಸಿ ಗಾಂಧೀಜಿ 7 ದಿನಗಳ ಕಾಲ ವಾಸ್ತವ್ಯ ಹೂಡಿದ ನೆನಪುಗಳನ್ನು ಸ್ಮರಿಸಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಅದೇ ಸಂದರ್ಭದಲ್ಲಿ ಗಾಂಧೀಜಿ ಭಾಗವಹಿಸಿದ್ದ ಗಾಂಧೀ ಸೇವಾ ಸಮ್ಮೇಳನವನ್ನು ನೆನೆಸಿಕೊಳ್ಳಲಾಯಿತು. ಈ ಸಮ್ಮೇಳನವನ್ನು ಗಾಂಧೀಜಿಯ ನಿಷ್ಠಾವಂತ ಅನುಯಾಯಿ ಹಾಗೂ “ಕರ್ನಾಟಕದ ಗಾಂಧೀ” ಎಂದೇ ಖ್ಯಾತರಾದ ಗಂಗಾಧರರಾವ್ ದೇಶಪಾಂಡೆ ಅವರ ಆಹ್ವಾನದ ಮೇರೆಗೆ ಹಮ್ಮಿಕೊಳ್ಳಲಾಗಿತ್ತು.
ಗಾಂಧೀಜಿಯ ಜೊತೆಗೆ ರಾಷ್ಟ್ರ ನಾಯಕರಾದ ಸರ್ದಾರ್ ವಲ್ಲಭಭಾಯಿ ಪಟೇಲ್, ಸರೋಜಿನಿ ನಾಯ್ಡು, ಕಸ್ತೂರಬಾ ಗಾಂಧೀ ಹಾಗೂ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಕೂಡ ಹಾಜರಿದ್ದರು. ಗಾಂಧೀಜಿ ಹುದಲಿ ಗ್ರಾಮಕ್ಕೆ ದಿನಂಪ್ರತಿ ಬಂದು, ಜನರೊಂದಿಗೆ ಬೆರೆತು ಮಾತನಾಡಿ, ಖಾದಿ ಧರಿಸುವುದು, ಸ್ವದೇಶಿ ಚಳವಳಿ, ಅಹಿಂಸೆ ಮತ್ತು ಶ್ರಮದ ಮಹತ್ವವನ್ನು ಸಾರಿದರು.
ಹುದಲಿ “ಖಾದಿಗ್ರಾಮ” ಎಂಬ ಹೆಸರನ್ನು ಪಡೆದು, ಇಂದಿಗೂ ಗಾಂಧೀಜಿಯ ತತ್ವಗಳನ್ನು ಜೀವಂತವಾಗಿ ಉಳಿಸಿಕೊಂಡಿದೆ. ಈ ಊರಿನಲ್ಲಿ ಮದ್ಯದಂಗಡಿಗಳಿಲ್ಲದಿರುವುದು ಗಾಂಧೀ ಬೋಧನೆಗಳಿಗೆ ನೀಡಿರುವ ಗೌರವದ ಒಂದು ವಿಶಿಷ್ಟ ನಿದರ್ಶನ. ಇಂತಹ ಇತಿಹಾಸ ಪ್ರಸಿದ್ಧ ಹುದಲಿ ಗ್ರಾಮ ನಮ್ಮ ಯಮಕನಮರಡಿ ಕ್ಷೇತ್ರದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ.
ಇದು ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ, ದೇಶಪ್ರೇಮ ಹಾಗೂ ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಕಲಿಸುವ ಪ್ರೇರಣಾ ಕೇಂದ್ರವಾಗಿದೆ.
Laxmi News 24×7