ನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ ಹರ್ಷ
ಕಲಬುರಗಿ: ವಿವಿಧ ಐದು ವಲಯಗಳಲ್ಲಿ ಸೂಚ್ಯಂಕಗಳಲ್ಲಿ ಗಣನೀಯ ಅಭಿವೃದ್ಧಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೈಗೊಂಡ ಕ್ರಮಗಳ ಕಾರ್ಯಸಾಧನೆಗಾಗಿ ಕಾಳಗಿ ತಾಲೂಕು ಡೆಲ್ಟಾ ಪಟ್ಟಿಯಲ್ಲಿ ದಕ್ಷಿಣ ಭಾರತದಲ್ಲಿಯೇ ಎರಡನೆಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
‘ಕೇಂದ್ರದ ನೀತಿ ಆಯೋಗವು ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೌಶಲ್ಯ, ಅಪೌಷ್ಠಿಕತೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಲಭ್ಯ ವಲಯಗಳಲ್ಲಿ ಆಗಿರುವ ಸಾಧನೆ ಕುರಿತಂತೆ ಸರ್ವೇ ನಡೆಸಿತ್ತು. ಮಾನವನ ಅಭಿವೃದ್ಧಿ ಸೂಚ್ಯಂಕ (ಹೂಮನ್ ಡೆವಲಪ್ಟೆಂಟ್ ಇಂಡೆಕ್ಸ್) ದಲ್ಲಿ ಆಗ ಕಂಡುಬಂದ ಅಂಕಿ ಅಂಶಗಳ ಪ್ರಕಾರ ಕಾಳಗಿ ತಾಲೂಕಿನಲ್ಲಿ ಈ ಎಲ್ಲ ಕ್ಷೇತ್ರಗಳ ಅಭಿವೃದ್ದಿ ಪ್ರತಿಶತಃ ಕ್ಕಿಂತ ಕಡಿಮೆ ದಾಖಲಾಗಿತ್ತು. ಇದೇ ರೀತಿ ಇರುವ ದೇಶದ ವಿವಿಧ ತಾಲೂಕಗಳ ಸರ್ವೇ ನಡೆಸಿ ಕಲಬುರಗಿ ಜಿಲ್ಲೆಯ ಅಫಝಲ್ ಪುರ, ಶಹಾಬಾದ್ ಹಾಗೂ ಕಾಳಗಿ ತಾಲೂಕುಗಳನ್ನು ಸೇರಿಸಿ ಒಟ್ಟು 500 ತಾಲೂಕುಗಳನ್ನು ಮಹತ್ವಾಕಾಂಕ್ಷಿ ತಾಲೂಕುಗಳೆಂದು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಜನೇವರಿ 7, 2023 ರ ಸಭೆಯಲ್ಲಿ ಘೋಷಿಸಲಾಗಿತ್ತು’.
‘ಈ ಮೂರು ತಾಲೂಕುಗಳಲ್ಲಿ ಕೃಷಿ, ಶಿಕ್ಷಣ, ನೈರ್ಮಲ್ಯ, ಸಾಮಾಜಿಕ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ವಲಯಗಳ ಅಭಿವೃದ್ಧಿ ಹಾಗೂ ಜನ ಜೀವನ ಮಟ್ಟ ಸುಧಾರಣೆಗಾಗಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ಜೊತೆಗೆ ಸರ್ಕಾರದ ಯೋಜನೆಗಳ ಮಹತ್ವದ ಬಗ್ಗೆ ಹಾಗೂ ಅವುಗಳ ಜಾರಿಗೊಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಹಾಕಿಕೊಂಡಿತ್ತು’.
‘ಪ್ರತಿ ಮೂರು ತಿಂಗಳು ವಿಮರ್ಶೆ ವರದಿಗಳ ಪ್ರಸ್ತುತಿ ಪರಿಣಾಮವಾಗಿ ಕಾಳಗಿ ತಾಲೂಕಿನಲ್ಲಿ ಈ ನಿಟ್ಟಿನಲ್ಲಿ ಅಂಕಿ ಅಂಶದಲ್ಲಿ ಪ್ರಗತಿ ಸಾಧಿಸಲಾಗಿದೆ. ಹಾಗಾಗಿ, ನೀತಿ ಆಯೋಗ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಮಹಾತ್ಮಾಕಾಂಕ್ಷಿ ತಾಲೂಕುಗಳಲ್ಲಿ ಸರ್ವೇ ನಡೆಸಿ ಕಾಳಗಿ ತಾಲೂಕಿಗೆ ಎರಡನೆಯ ಸ್ಥಾನ ನೀಡುವುದರ ಜೊತೆಗೆ 1 ಕೋಟಿ ರೂ ವಿಶೇಷ ಅನುದಾನ ಘೋಷಿಸಿದೆ’.
‘ನೀತಿ ಆಯೋಗದ ಈ ವಿಶೇಷ ಅನುದಾನದ ಸಾರ್ವಜನಿಕರ ಬಳಕೆಗೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಸಮಿತಿಯಲ್ಲಿ ರೂಪಿಸಲಾಗುತ್ತಿದೆ. ಅದರಂತೆ ಅನುದಾನದ ಸಮರ್ಪಕ ಹಾಗೂ ಕಟ್ಟುನಿಟ್ಟಿನ ಬಳಕೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು’.
ಕಾಳಗಿ ತಾಲೂಕು ದಕ್ಷಿಣ ಭಾರತದಲ್ಲಿಯೇ ಎರಡನೆಯ ಸ್ಥಾನ ಪಡೆದುಕೊಂಡು ನೀತಿ ಆಯೋಗದಿಂದ ರೂ 1 ಕೋಟಿ ವಿಶೇಷ ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಅನುದಾನ ಬಳಕೆಗಾಗಿ ಈಗಾಗಲೇ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
Laxmi News 24×7