ಹಾವೇರಿ: ಅಂತರ್ಜಾಲದಲ್ಲಿ ಹಲವು ಬಗೆಯ ವಂಚನೆಗಳು ನಡೆಯುತ್ತಲೇ ಇರುತ್ತವೆ. ಹಿಂದೆಲ್ಲ ಮನೆಗೆ ಬ್ಯಾಂಕ್ಗಳಿಗೆ ಹಣ ಸಾಗಿಸುವ ವಿಷಯ ತಿಳಿದು ದಾಳಿ ಮಾಡುತ್ತಿದ್ದ ಖದೀಮರು ಇದೀಗ ಅಂತರ್ಜಾಲದ ಮೂಲಕ ಜನರ ಹಣ ದೋಚುತ್ತಿದ್ದಾರೆ. ಇದೇ ರೀತಿಯ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.
ಭವಿಷ್ಯವನ್ನು ತಿಳಿದು ಕೊಳ್ಳಲು ತನ್ನ ಮೊಬೈಲ್ನಲ್ಲಿ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಂಡ ಯುವತಿಯೊಬ್ಬಳು ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳೆದುಕೊಂಡಿದ್ದಾಳೆ. ಜ್ಯೋತಿಷ್ಯ ಸಂಬಂಧಿತ ಅಪ್ಲಿಕೇಶನ್ ಡೌನಲೋಡ್ ಮಾಡಿ ಮಾಹಿತಿ ಪಡೆಯಲು ಮುಂದಾದಾಗ ಯುವತಿಗೆ ಇಂತಹ ಮೋಸವಾಗಿದೆ.
ಘಟನೆಯ ಹಿನ್ನೆಲೆ: ತನ್ನ ಮುಂದಿನ ಭವಿಷ್ಯದ ಬಗ್ಗೆ ಕುತೂಹಲ ಹೊಂದಿದ್ದ ಯುವತಿ ಇದಕ್ಕಾಗಿ ಆನ್ಲೈನ್ ಜ್ಯೋತಿಷ್ಯದ ಮೊರೆ ಹೋಗಿದ್ದಳು. ಇದಕ್ಕಾಗಿ ಆಕೆ ಅಪ್ಲಿಕೇಶನ್ವೊಂದನ್ನು ಡೌನ್ಲೋಡ್ ಮಾಡಿಕೊಂಡಿದ್ದಳು. ಅದರಲ್ಲಿ ಜ್ಯೋತಿಷಿಗಳು ಹೇಳಿದಂತೆ ವಿವಿಧ ಪೂಜೆಯನ್ನೂ ಕೂಡಾ ಮಾಡಿಸಿದ್ದಳು. ಅವರು ತಾಯತ ಸಹ ಕಳುಹಿಸಿಕೊಟ್ಟಿದ್ದಳು. ಇದೇ ವೇಳೆ ಯುವತಿಯ ತಂದೆ ತಾಯಿಗೆ ಅಪತ್ತು ಬರಲಿದೆ ಎಂದು ಜ್ಯೋತಿಷಿಗಳು ಯುವತಿಗೆ ಹೇಳಿದ್ದರು.
ನೀವು ಪೂಜೆ ಮಾಡಿಸಿದರೆ ನಿಮಗೆ ಸರ್ಕಾರಿ ಉದ್ಯೋಗ ಸಿಗುತ್ತೆ. ನಿಮಗೆ ಉತ್ತಮ ಆರೋಗ್ಯ, ಒಳ್ಳೆಯ ವರ ಸಿಗುತ್ತಾನೆ, ಜೀವನ ಸುಖಮಯವಾಗುತ್ತದೆ ಎಂದು ನಂಬಿಸಲಾಗಿತ್ತು. ಎಲ್ಲ ಒಳ್ಳೆಯದಾಗಬೇಕು ಎಂದರೆ ನೀವು ಕನಿಷ್ಠ 250 ಗ್ರಾಂ ಚಿನ್ನ ನೀಡಬೇಕು ಅದನ್ನು ನಾವು ದೇವರ ಮುಂದೆ ಇಟ್ಟು ಪೂಜೆ ಮಾಡುತ್ತೇವೆ. ನಂತರ ಅದನ್ನು ನಿಮಗೆ ವಾಪಸ್ ಕೊಡುತ್ತೇವೆ ಎಂದು ನಂಬುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೋಸ ಹೋಗಿದ್ದು ಅರಿವಾಗಿ ದೂರು ನೀಡಿದ ಯುವತಿ: ಅದರಂತೆ ಯುವತಿ ಮನೆಯಲ್ಲಿನ ಎಲ್ಲ ಬಂಗಾರವನ್ನು ಜ್ಯೋತಿಷಿಗಳು ಕಳಿಸಿದ ವ್ಯಕ್ತಿಗೆ ನೀಡಿದ್ದಾಳೆ. ಬಂಗಾರ ಪಡೆದ ನಂತರ ಜ್ಯೋತಿಷಿಗಳು ಪೋನ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಇದರಿಂದ ಹೆದರಿದ ಯುವತಿ ಹಾವೇರಿ ಸೈಬರ್ ಕ್ರೈಂ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯುವತಿ ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರು; ಮೂವರ ಬಂಧನ: ಬಂಧಿತ ಆರೋಪಿಗಳಿಂದ 20 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ರಾಯಚೂರು ಜಿಲ್ಲೆ ಸಿಂಧನೂರಿನ ರಮೇಶ ಶಾಸ್ತ್ರಿ, ಗೋಪಾಲಶಾಸ್ತ್ರಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಓರ್ವ ಆರೋಪಿ ಗುರುಶಾಸ್ತ್ರಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಪೊಲೀಸರ ಈ ಕಾರ್ಯ ಯುವತಿಗೆ ನೆಮ್ಮದಿ ತಂದಿದೆ. ಆದರೆ, ಈ ರೀತಿಯ ವಂಚನೆಗಳಿಗೆ ಮರಳಾಗದಂತೆ ಯುವತಿ ಮನವಿ ಮಾಡಿದ್ದಾಳೆ. ಅಂತರ್ಜಾಲದಲ್ಲಿ ಮಾಹಿತಿಯ ಮಹಾಪೂರವೇ ಬರುತ್ತದೆ. ಆದರೆ ಇಲ್ಲ ಸಲ್ಲದ ಆಮೀಷಗಳನ್ನು ಒಡ್ಡಿ ಜನರನ್ನು ವಂಚನೆ ಮಾಡಲಾಗುತ್ತಿದೆ. ಇದರಲ್ಲಿ ಎಷ್ಟು ಜಾಗೃತಿವಹಿಸಿದರೂ ಕಡಿಮೆಯೇ ಎನ್ನುತ್ತಾರೆ ಸ್ಥಳೀಯ ರಾಜು.
ಈ ರೀತಿಯ ಹಲವು ಅಪ್ಲಿಕೇಶನ್‌ಗಳು ಅಂತರ್ಜಾಲದಲ್ಲಿವೆ. ಇವುಗಳ ಡೌನ್ ಲೋಡ್ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಪೊಲೀಸ್ ಇಲಾಖೆ ಎಷ್ಟೆಲ್ಲ ಪ್ರಯತ್ನ ಮುಂಜಾಗ್ರತೆ ಮೂಡಿಸಿದರು ಇಂತಹ ಘಟನೆಗಳು ವರದಿಯಾಗುತ್ತಲೇ ಇವೆ. ಈ ಕುರಿತಂತೆ ಜಾಗ್ರತರಾಗಬೇಕಿದೆ ಎಂದು ರಾಜು ಹೇಳಿದ್ದಾರೆ.
Laxmi News 24×7