ಕೋಲಾರ, ಮಾರ್ಚ್ 16: ಅದು 24 ವರ್ಷಗಳ ಹಿಂದೆ, ಅಂದರೆ 2001 ಮಾರ್ಚ್ 1 ರಲ್ಲಿ ನಷ್ಟದ ನೆಪವೊಡ್ಡಿ ಕೇಂದ್ರ ಸರ್ಕಾರ ಕೋಲಾರ (Kolar) ಚಿನ್ನದ ಗಣಿಗೆ (Gold Mine) ಬೀಗ ಹಾಕಿತ್ತು. ಆದರೆ ಚಿನ್ನದ ಗಣಿಗೆ ಬೀಗ ಹಾಕುವ ಸಂದರ್ಭದಲ್ಲಿ ಚಿನ್ನದ ಗಣಿ ಕಾರ್ಮಿಕರ ವೇತನ ಬಾಕಿ, ನಿವೃತ್ತಿ ವೇತನ ಸೇರಿ 58 ಕೋಟಿ ರೂಪಾಯಿ ಬಾಕಿ ಇತ್ತು. ಹೀಗಿರುವಾಗಲೇ ಬೀದಿಗೆ ಬಿದ್ದ ಹಲವಾರು ಕಾರ್ಮಿಕ ಸಂಘಟನೆಗಳು ತಮಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದವು. 2006 ಜುಲೈ 7 ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲೂ ಚಿನ್ನದ ಗಣಿ ಪುನರಾರಂಭಕ್ಕೆ ಒಪ್ಪಿಗೆಯನ್ನು ಸೂಚಿಸಿತ್ತು. ಈ ಬೆನ್ನಲ್ಲೇ 2010 ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡಾ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಮತ್ತೆ ಕೋಲಾರದ ಚಿನ್ನದ ಗಣಿಯನ್ನು ಮತ್ತೆ ಆರಂಭಿಸಬೇಕು ಎಂದ ಸೂಚನೆ ನೀಡಿತ್ತು.
ನಂತರ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಹೈಕೋರ್ಟ್ ಅದೇಶವನ್ನು ರದ್ದು ಮಾಡಿತ್ತು. 2013 ರಲ್ಲಿ ಗ್ಲೋಬಲ್ ಟೆಂಡರ್ ಕರೆದು ಷರತ್ತುಗಳೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಮತ್ತೆ ಚಿನ್ನದ ಗಣಿಯನ್ನು ಪುನರಾರಂಭ ಮಾಡುವ ಕುರಿತು ಸುಪ್ರೀಂಕೋರ್ಟ್ ಆದೇಶವನ್ನು ಹೊರಡಿಸಿತ್ತು. ಆದರೆ ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಗಣಿಗಾರಿಕೆ ಆರಂಭಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಗ್ಲೋಬಲ್ ಟೆಂಡರ್ ಮೂಲಕ ಚಿನ್ನದ ಗಣಿಯನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು.
ತ್ಯಾಜ್ಯ ಮಣ್ಣಿನಲ್ಲೂ ಇದೆ ಚಿನ್ನ!
ಈ ಹಿಂದೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಕಾಲದಲ್ಲಿ ಚಿನ್ನದ ಅದಿರಿನಿಂದ ಚಿನ್ನವನ್ನು ಬೇರ್ಪಡಿಸಿ ಬಿಸಾಡಿರುವ ತ್ಯಾಜ್ಯ ಮಣ್ಣನ್ನು ಮರು ಸಂಸ್ಕರಣೆ ಮಾಡಿದರೆ ಅದರಲ್ಲೂ ಚಿನ್ನ ಸಿಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಮಣ್ಣಿನಲ್ಲಿ ಅಂದರೆ ಕೆಜಿಎಫ್ನಲ್ಲಿರುವ 13 ಸೈನೈಡ್ ಗುಡ್ಡಗಳಲ್ಲಿ ಚಿನ್ನವನ್ನು ಮತ್ತೊಮ್ಮೆ ಶೋಧಿಸುವ ಕೆಲಸಕ್ಕೆ ಟೆಂಡರ್ ಕರೆದಿದೆ. ಕೆಜಿಎಫ್ ನಗರದ ಸುತ್ತಮುತ್ತ 13 ಸೈನೈಡ್ ಗುಡ್ಡಗಳಿದ್ದು ಅದರಲ್ಲಿ ಸುಮಾರು 50 ಲಕ್ಷ ಮಿಲಿಯನ್ ಟನ್ ಮಣ್ಣಿದೆ ಎಂದು ಅಂದಾಜಿಸಲಾಗಿದೆ.