Breaking News

ಕಾಲುವೆಗೆ ಬಿದ್ದು ಮೃತಪಟ್ಟ ನರೇಗಾ ಕೂಲಿಕಾರ ಹನುಮಂತಪ್ಪ ಬಾಗಪ್ಪ

Spread the love

ಗಂಗಾವತಿ (ಕೊಪ್ಪಳ) : ನರೇಗಾದ ಕೂಲಿಕಾರರೊಬ್ಬರು ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್ (ನಂಬರ್ 28ನೇ ಕಾಲುವೆ) ಬಳಿ ಭಾನುವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಹನುಮಂತಪ್ಪ ಬಾಗಪ್ಪ ಅದಾಪುರ ಎಂದು ಗುರುತಿಸಲಾಗಿದೆ. ಬಡ ಕುಟುಂಬಕ್ಕೆ ಸೇರಿದ್ದ ಈ ವ್ಯಕ್ತಿ ಗ್ರಾಮ ಪಂಚಾಯಿತಿಗಳು ಅನುಷ್ಠಾನ ಮಾಡುವ ಕೇಂದ್ರ ಸರ್ಕಾರದ ನರೇಗಾ ಕೂಲಿ ಕೆಲಸಕ್ಕೆ ಬಂದಿದ್ದ ಎಂದು ಗೊತ್ತಾಗಿದೆ.

ಕೆಲಸ ನಡೆಯುವ ಸ್ಥಳದಲ್ಲಿ ಕೂಲಿಕಾರರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು. ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಘಟನೆಗೆ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಪ್ಪ ನೇರ ಕಾರಣವಾಗಿದ್ದಾರೆ ಎಂದು ನರೇಗಾ ಕೂಲಿಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು

‘ಕೆಲಸ ನಿಗಧಿ ಮಾಡಿದ ಸ್ಥಳದಲ್ಲಿ ಆಯಾ ಪಂಚಾಯಿತಿಯಿಂದಲೇ ಪಿಡಿಒ, ಕೂಲಿಕಾರರಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ತುರ್ತು ಚಿಕಿತ್ಸೆಗಾಗಿ ಸಿಬ್ಬಂದಿ ನಿಯೋಜನೆ, ಮಹಿಳಾ ಕೂಲಿಕಾರರಿಗೆ ಐದು ವರ್ಷದೊಳಗಿನ ಮಕ್ಕಳಿದ್ದಲ್ಲಿ ಆ ಮಕ್ಕಳ ಪಾಲನೆಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ಪಿಡಿಒ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡಿರಲಿಲ್ಲ. ಬಿರು ಬೇಸಿಗೆ ಈಗಾಗಲೆ ಆರಂಭವಾಗಿದ್ದು, ವಿಪರೀತ ಬಿಸಿಲಿನ ಮಧ್ಯೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಾಯಾರಿಕೆಯಾಗಿ ಹನುಮಂತಪ್ಪ ಅದಾಪುರ, ನೀರು ಕುಡಿಯಲು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ಹೋಗಿದ್ದಾರೆ. ಕಾಲುವೆಯ ಇಳಿಜಾರಿನಲ್ಲಿ ನಿಂತು ಬಾಗಿ ನೀರು ಕುಡಿಯುವ ಸಂದರ್ಭದಲ್ಲಿ ಆಯಾ ತಪ್ಪಿ ಕಾಲುವೆಗೆ ಜಾರಿದ್ದಾರೆ. ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಹನುಮಂತಪ್ಪ ಕೊಚ್ಚಿಕೊಂಡು ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆರನೇ ದಿನದ ಕೆಲಸ : ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ರಾಜಶೇಖರ್, ‘ಚಿಕ್ಕಡಂಕನಕಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲಾ ಹೂಳು ತೆಗೆಯುವ ಕಾಮಗಾರಿ ಕಳೆದ ಐದು ದಿನಗಳಿಂದ ನಡೆಯುತಿತ್ತು. ಭಾನುವಾರಕ್ಕೆ ಆರನೇ ದಿನ. ಕೆಲಸ ನಡೆಯುತ್ತಿದ್ದ ಸ್ಥಳ ಮುಖ್ಯ ಕಾಲುವೆಯಿಂದ ಐನೂರು ಮೀಟರ್ ಅಂತರದಲ್ಲಿದ್ದ ಕಾರಣ ಕೆಲಸ ಮುಗಿದ ಬಳಿಕ ಈ ಕೂಲಿಕಾರ ಕೈ ಕಾಲು ಮುಖ ತೊಳೆದುಕೊಳ್ಳಲು ಕಾಲುವೆಗೆ ಹೋದಾಗ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಕಾರಣ ಕೇಳಿ ಪಿಡಿಒಗೆ ನೋಟಿಸ್ ಜಾರಿ ಮಾಡಲಾಗುವುದು’ ಎಂದರು.

ಕಾಲುವೆಯಲ್ಲಿ ಹುಡುಕಾಟ : ನಾಪತ್ತೆಯಾದ ಹನುಮಂತಪ್ಪನ ಪತ್ತೆಗೆ ಮೊದಲಿಗೆ ಸ್ಥಳೀಯರು ಕಾಲುವೆಯಲ್ಲಿ ಹುಡುಕಿದ್ದಾರೆ. ಆದರೆ ಸಿಗದಿದ್ದರಿಂದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಯಿಸಿ, ಸುಮಾರು ನಾಲ್ಕಾರು ಗಂಟೆ ಕಾರ್ಯಾಚರಣೆ ಮಾಡಲಾಗಿದೆ. ಆದರೆ ಇನ್ನೂ ಆ ವ್ಯಕ್ತಿ ಪತ್ತೆಯಾಗಿಲ್ಲ.

ಕನಕಗಿರಿ ತಾಲೂಕು ಪಂಚಾಯಿತಿಯ ನರೇಗಾದ ಸಹಾಯಕ ನಿರ್ದೇಶಕಿ ಶರ್ಪೂನಿಸಾ ಬೇಗಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಕ್ತಿ ಒಂದೊಮ್ಮೆ ನಾಪತ್ತೆಯಾಗಿದ್ದರೆ ಆತನ ಕುಟುಂಬಕ್ಕೆ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ 2 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ