ಕೊಪ್ಪಳ: ಜಗತ್ತಿನಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕವಾದ ಧರ್ಮವಾಗಿದ್ದು, ನನಗೆ ಮಕ್ಕಾ-ಮದೀನಾದ ಹಜ್ ಯಾತ್ರೆಗೆ ಹೋಗುವ ತೀವ್ರ ಆಸೆಯಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಹೇಳಿದ್ದಾರೆ.
ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಹಾಗೂ ಧಾರ್ಮಿಕ ಆಚರಣೆಗಳ ಕುರಿತು ಹಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ. ಆದರೆ ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಶ್ರೇಷ್ಠ ಧರ್ಮವಾಗಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಧರ್ಮ ಹೇಳಿಕೊಡುತ್ತದೆ. ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಮಹಮ್ಮದ್ ಪೈಗಂಬರರು ಇಡೀ ಬ್ರಹ್ಮಾಂಡಕ್ಕೆ ಕುರಾನ್ ನೀಡಿದ್ದಾರೆ. ಯಾರು ಬೇಕಾದರೂ ಕುರಾನ್ ಓದಬಹುದು, ನಾನೂ ಸಹ ಕುರಾನ್ ಅಧ್ಯಯನ ಮಾಡಲು ಸಿದ್ಧನಿದ್ದೇನೆ ಎಂದು ರಾಯರೆಡ್ಡಿ ತಿಳಿಸಿದರು.
ಹಜ್ಗೆ ಹೋಗಲು ಆಸೆಯಿದೆ:
ನನಗೆ ಪವಿತ್ರ ಮಕ್ಕಾಗೆ ಹೋಗಿ ಹಜ್ ಯಾತ್ರೆ ಮಾಡಬೇಕೆಂಬ ಬಹುದೊಡ್ಡ ಆಸೆಯಿದೆ. ಆದರೆ ಅಲ್ಲಿಗೆ ಹೋಗಲು ನನಗೆ ಅವಕಾಶವಿಲ್ಲ. ಅಲ್ಲಿಗೆ ಪ್ರವೇಶ ಪಡೆಯಬೇಕಾದರೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಮಠ-ಮಂದಿರಗಳಿಗೆ ಹೋಗಲ್ಲ:
ಇದೇ ವೇಳೆ ಮಠ-ದೇವಾಲಯಗಳ ಭೇಟಿ ಬಗ್ಗೆ ಪ್ರಸ್ತಾಪಿಸಿದ ಅವರು, ನಾನು ಮಠ-ಮಾನ್ಯಗಳು, ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ಧಾರ್ಮಿಕ ಕ್ಷೇತ್ರಗಳಿಗೆ ಹೋದರೂ ಕೇವಲ ಅವುಗಳ ಇತಿಹಾಸ ಅಧ್ಯಯನಕ್ಕಾಗಿ ಮಾತ್ರ ಹೋಗುತ್ತೇನೆ. ಜನರು ಮತಾಂಧರು ಮತ್ತು ಜಾತಿವಾದಿಗಳಾಗಬಾರದು. ಕೇವಲ ಮಸೀದಿಗೆ ಹೋಗಿ ‘ಅಲ್ಲಾಹು ಅಕ್ಬರ್’ ಎಂದ ಮಾತ್ರಕ್ಕೆ, ಅಥವಾ ದೇವಸ್ಥಾನಗಳಿಗೆ ಹೋದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ; ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸರ್ಕಾರದ ಅನುದಾನದಲ್ಲೇ ಶಾದಿ ಮಹಲ್:
ಇಲ್ಲಿನ ಶಾದಿ ಮಹಲ್ಗೆ ಸರ್ಕಾರವೇ ಹಣ ನೀಡಿದೆ ಹೊರತು ಸೌದಿ ಅರೇಬಿಯಾ, ಪಾಕಿಸ್ತಾನ ಅಥವಾ ಯಾವುದೇ ಮುಸ್ಲಿಂ ರಾಷ್ಟ್ರಗಳಿಂದ ಹಣ ಬಂದಿಲ್ಲ. ಯಾವುದೇ ಧರ್ಮವೇ ಇರಲಿ, ಧಾರ್ಮಿಕ ಕ್ಷೇತ್ರಗಳ ಹುಂಡಿ ಹಣ ಹಾಗೂ ದೇವಸ್ಥಾನ-ಮಸೀದಿಗಳ ಭೂಮಿಯನ್ನು ಮುಟ್ಟಿದರೆ ಅದು ಮಹಾಪಾಪ ಎಂದು ಎಚ್ಚರಿಕೆ ನೀಡಿದರು.
Laxmi News 24×7