ಬೆಳಗಾವಿ: ಜಿಲ್ಲೆಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ವೈಫಲ್ಯ ತಲೆದೋರಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಪಡಿತರಪಡೆಯಲು ಇಂದು ಕೊನೆಯ ದಿನವಾಗಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಹಾಗೂ ಯರಗಟ್ಟಿ ತಾಲೂಕಿನ ಮುಗಳಿಹಾಳ ಸೇರಿದಂತೆ ಹಲವೆಡೆ ಕಾರ್ಡುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಆದರೆ, ತಾಂತ್ರಿಕ ಅಡಚಣೆಯಿಂದಾಗಿ ಸರ್ವರ್(Server) ಸಂಪರ್ಕ ಅತ್ಯಂತ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಂತ್ರದಲ್ಲಿ ಹೆಬ್ಬೆರಳಿನ ಗುರುತು ಸ್ವೀಕರಿಸುತ್ತಿಲ್ಲ.
ತಾಂತ್ರಿಕ ದೋಷದ ಕಾರಣ ಇಲ್ಲಿಯವರೆಗೆ ಶೇ. 50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ ತಲುಪಿದೆ. ಉಳಿದ ಅರ್ಧದಷ್ಟು ಜನ ಕಳೆದ ನಾಲ್ಕೈದು ದಿನಗಳಿಂದ ದಿನಸಿ ಸಿಗದೆ ಅಂಗಡಿಗಳ ಸುತ್ತ ಅಲೆಯುತ್ತಿದ್ದಾರೆ.
ಸರ್ವರ್ ಸಮಸ್ಯೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ತಾಂತ್ರಿಕ ದೋಷ ಸರಿಪಡಿಸಿ ಎಲ್ಲರಿಗೂ ಸಮರ್ಪಕವಾಗಿ ಪಡಿತರ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Laxmi News 24×7