ಬೆಳಗಾವಿ: ಟಾಟಾ ಎಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ದೇಮಟ್ಟಿ–ಮಲ್ಲಾಪುರ ಮಾರ್ಗದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ದೇಮಟ್ಟಿ ಗ್ರಾಮದ ಅಜಾದ್ ಇಸ್ಮಾಯಿಲ್ ಜಮಾದಾರ (45), ಅವರ ಪತ್ನಿ ಕೈರೂನ್ ಆಜಾದ್ ಜಮಾದಾರ (40) ಹಾಗೂ ಅಜಾದ್ ಅವರ ಅಳಿಯ ಬಾಬಾಜಾನ್ ನಿಸ್ಸಾರಅಹ್ಮದ್ ತಡಕೋಡ (16) ಮೃತಪಟ್ಟಿದ್ದಾರೆ.
ಮೃತ ದಂಪತಿ ಮೂಲತಃ ಧಾರವಾಡ ತಾಲೂಕಿನ ಹೆಗ್ಗೇರಿ ಗ್ರಾಮದವರಾಗಿದ್ದು, ಅಳಿಯ ದೇಮಟ್ಟಿ ಗ್ರಾಮದ ನಿವಾಸಿಯಾಗಿದ್ದನು. ಅಪಘಾತದಲ್ಲಿ ಮೃತಪಟ್ಟ ದಂಪತಿಯ ಅಂತ್ಯಕ್ರಿಯೆಯನ್ನು ಹೆಗ್ಗೇರಿ ಗ್ರಾಮದಲ್ಲಿ ನೆರವೇರಿಸಲಾಗಿದ್ದು, ಬಾಬಾಜಾನ್ ಅಂತ್ಯಕ್ರಿಯೆ ದೇಮಟ್ಟಿಯಲ್ಲಿ ಜರುಗಿದೆ ಎಂದು ಮೂಲಗಳು ತಿಳಿಸಿವೆ.
ಮೂವರು ದೇಮಟ್ಟಿಯಿಂದ ಚನ್ನಮ್ಮನ ಕಿತ್ತೂರಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Laxmi News 24×7