ಗೋಕಾಕ: ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಕೆಪಿಸಿಸಿ ಕೊರೋನಾ ವಿಪತ್ತು ಪರಿಹಾರ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು ಇಂದು ಅಥಣಿ ತಾಲೂಕಿನ ಕಾಂಗ್ರೆಸ್ ಮುಖಂಡ ಡಾ. ಪದ್ಮಾಜಿತ ನಾಡಗೌಡ ಪಾಟೀಲ ಅವರು ಎರಡು ಲಕ್ಷ ರೂ. ಚೆಕ್ಕನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಹಸ್ತಾಂತರಿಸಿದರು.
ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಚೆಕ್ ಸ್ವೀಕರಿಸಿ ಪದ್ಮಾಜಿತ ನಾಡಗೌಡ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಸದಾ ಕಾಲ ಇರುತ್ತದೆ. ಹೀಗಾಗಿ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ವಿಪತ್ತು ನಿಧಿ ಸಂಗ್ರಹಿಸಿ ವೈದ್ಯಕೀಯ ಸಲಕರಣೆಗಳು ಮತ್ತು ಕೂಲಿ ಇಲ್ಲದೆ ಪರದಾಡುತ್ತಿರುವ ಬಡವರಿಗೆ ನೆರವಾಗುತ್ತದೆ ಎಂದರು.