Breaking News

ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಗೆ ಡಾ. ಪ್ರಭಾಕರ ಕೋರೆ ಆಕ್ರೋಶ; ಕಠಿಣ ಕ್ರಮಕ್ಕೆ ಆಗ್ರಹ

Spread the love

ಬೆಳಗಾವಿ: ವಿಶ್ವಗುರು ಬಸವಣ್ಣನವರ ತತ್ವಾದರ್ಶ, ವಚನ ಸಾಹಿತ್ಯ ಹಾಗೂ ವೀರಶೈವ-ಲಿಂಗಾಯತ ಧರ್ಮದ ಮೂಲ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ’ ಕೃತಿಯನ್ನು ಕೆಎಲ್‌ಇ ಕಾಹೇರ್ ಕುಲಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ತೀವ್ರವಾಗಿ ಖಂಡಿಸಿದ್ದಾರೆ.

ಬಸವಣ್ಣನವರು ಸರ್ವಸಮಾನತೆಯ ಹರಿಕಾರರಾಗಿದ್ದು, ಸಮಾಜಕ್ಕೆ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಅಪವಾದಗಳನ್ನು ಮಾಡುವುದು ಅಕ್ಷಮ್ಯ. ಕೋಟ್ಯಂತರ ಬಸವಭಕ್ತರ ಶ್ರದ್ಧೆ, ನಂಬಿಕೆ ಹಾಗೂ ಆತ್ಮಗೌರವಕ್ಕೆ ಧಕ್ಕೆ ತರುವ ಪ್ರಯತ್ನವನ್ನು ರವಿ ಹಂಜ್ ಮಾಡಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.

ರವಿ ಹಂಜ್ ಅವರು ಬಸವಣ್ಣನವರ ಕುರಿತು ಪ್ರಚಾರಕ್ಕಾಗಿ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದು, ವೀರಶೈವ-ಲಿಂಗಾಯತ ಸಮುದಾಯದ ಕುರಿತು ಬಳಸಿರುವ ಪದಗಳು ಅವರ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಬಸವ ಪರಂಪರೆಯನ್ನು ತಿರುಚಿ, ಅಪಾರ್ಥ ಮೂಡಿಸಿ ಭಕ್ತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಬರಹಗಳನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಸವ ಮಂಟಪ’ ಕೃತಿಯ ಮೂಲಕ ಸಮಾಜದಲ್ಲಿ ಗೊಂದಲ, ಅಪನಂಬಿಕೆ ಹಾಗೂ ವಿಭಜನೆ ಸೃಷ್ಟಿಸುವ ಪ್ರಯತ್ನ ನಡೆದಿದ್ದು, ಇದು ಕೇವಲ ಬರಹದ ವಿಚಾರವಲ್ಲ, ಇಡೀ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದ ವಿಷಯವಾಗಿದೆ. ವಿವಾದಿತ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ. ಆದರೆ, ಲೇಖಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ಬಸವಣ್ಣನವರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ವಾಕ್ ಸ್ವಾತಂತ್ರ್ಯಕ್ಕೂ ಮಿತಿ ಇದ್ದು, ಅದನ್ನು ಮೀರಿದಾಗ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಸವಭಕ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಲಕ್ಷಾಂತರ ಭಕ್ತರೊಂದಿಗೆ ನಿರ್ಣಾಯಕ ಹೋರಾಟ ನಡೆಸಲಿದೆ ಎಂದು ಡಾ. ಪ್ರಭಾಕರ ಕೋರೆ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಗಾಂಜಾ, ಚರಸ್ ಪತ್ತೆ: ಪತ್ನಿಯನ್ನು ನೋಡಲು ಬಂದಿದ್ದ ವ್ಯಕ್ತಿ ಅರೆಸ್ಟ್

Spread the loveಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ಮಾದಕ ವಸ್ತುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ