Breaking News

ದಂಡು ಮಂಡಳಿ 756 ಎಕರೆ ಪಾಲಿಕೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ

Spread the love

ಬೆಳಗಾವಿ:ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ನಾಗರಿಕ ಪ್ರದೇಶಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ವಸತಿ ಪ್ರದೇಶ, ಮಾರುಕಟ್ಟೆ, ರಸ್ತೆಗಳು, ಬಂಗಲೆಗಳು ಸೇರಿದಂತೆ ಒಟ್ಟು 756 ಎಕರೆ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಡು ಮಂಡಳಿ ವ್ಯಾಪ್ತಿಯ ನಾಗರಿಕ ಪ್ರದೇಶಗಳನ್ನು ಸ್ಥಳೀಯ ನಗರ ಸಂಸ್ಥೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ನಾಗರಿಕ ಪ್ರದೇಶಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಸುಮಾರು 700 ಪುಟಗಳ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ವರದಿಯಲ್ಲಿ ದಂಡು ಮಂಡಳಿ ವ್ಯಾಪ್ತಿಯಲ್ಲಿರುವ ವಸತಿ ಮನೆಗಳು, ವಾಣಿಜ್ಯ ಮಳಿಗೆಗಳು, ಬಂಗಲೆಗಳು, ಖಾಲಿ ಪ್ರದೇಶಗಳು, ಮಾರುಕಟ್ಟೆಗಳು, ರಸ್ತೆಗಳು ಸೇರಿದಂತೆ ವಿವಿಧ ಆಸ್ತಿಗಳ ವಿವರಗಳನ್ನು ದಾಖಲಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ವರದಿಯನ್ನು ಪರಿಶೀಲಿಸಿದ ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಲಿದೆ. ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು, ಕೇಂದ್ರದ ಅನುಮೋದನೆ ದೊರೆತ ಬಳಿಕವೇ ಪ್ರದೇಶಗಳ ಹಸ್ತಾಂತರಕ್ಕೆ ಅಂತಿಮ ರೂಪ ಸಿಗಲಿದೆ ಎಂದು ವಿವರಿಸಿದರು.
₹350 ಕೋಟಿ ಸಾಲದ ಹೊರೆ
ದಂಡು ಮಂಡಳಿ ಸದ್ಯ ಸುಮಾರು ₹350 ಕೋಟಿ ಸಾಲದ ಹೊರೆ ಹೊಂದಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ಪ್ರದೇಶಗಳನ್ನು ಪ್ರತ್ಯೇಕಿಸಿ ಸ್ಥಳೀಯ ನಗರ ಸಂಸ್ಥೆಗೆ ಹಸ್ತಾಂತರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಂಡು ಮಂಡಳಿ ವ್ಯಾಪ್ತಿಯ ಯಾವುದೇ ಆಸ್ತಿಗಳ ದುರ್ಬಳಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಿಲಿಟರಿ ಪ್ರದೇಶ ಪ್ರತ್ಯೇಕ
ಕೇಂದ್ರ ಸರ್ಕಾರ ಈಗಾಗಲೇ ಆಯ್ದ ದಂಡು ಮಂಡಳಿಗಳ ನಾಗರಿಕ ಪ್ರದೇಶಗಳನ್ನು ಬೇರ್ಪಡಿಸಿ, ಸಮೀಪದ ನಗರ ಸ್ಥಳೀಯ ಸಂಸ್ಥೆಗಳು ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದೆ. ಆದರೆ, ಸಂಪೂರ್ಣ ಮಿಲಿಟರಿ ಬಳಕೆಯಲ್ಲಿರುವ ಪ್ರದೇಶಗಳನ್ನು ಪ್ರತ್ಯೇಕ ಸೇವಾ ನಿಲ್ದಾಣಗಳಾಗಿ ಉಳಿಸಿಕೊಳ್ಳುವ ಉದ್ದೇಶವಿದೆ.
ನಾಗರಿಕ ಪ್ರದೇಶಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ