Breaking News

ರಾಜ್ಯದ 224 ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಶಿರಪುರ ಮಾದರಿ: ಅಜಯ್ ಸಿಂಗ್

Spread the love

ಕಲಬುರಗಿ: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಯೋಜನೆ, ಬ್ರಿಡ್ಜ್ ಕಮ್ ಬ್ಯಾರೇಜ್, ಸರಣಿ ಚೆಕ್ ಡ್ಯಾಂ, ಗೋಕಟ್ಟಾ ನಿರ್ಮಾಣ ಸೇರಿದಂತೆ ಮಹಾರಾಷ್ಟ್ರದ ಶಿರಪುರ ಮಾದರಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್  ಹೇಳಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು, ಕೆಕೆಆರ್‌ಡಿಬಿ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕೈಗೊಳ್ಳಲಾಗುವ ಯೋಜನೆಗಳ ವಿವರವನ್ನು ಒಳಗೊಂಡ ಡ್ಯಾಶ್‌ಬೋರ್ಡ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಪ್ರತಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಯಾವ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂಬುದನ್ನು ಡ್ಯಾಶ್‌ಬೋರ್ಡ್‌ನಲ್ಲಿ ವಿವರಿಸಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆಗೆ ಪ್ರಸಕ್ತ 2026-27ನೇ ಸಾಲಿನಲ್ಲಿ ಒಟ್ಟು 3,333 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದಾದ್ಯಂತ ಇಲಾಖೆಯ ಅಧೀನದಲ್ಲಿರುವ 3,810 ಕೆರೆಗಳ ಪೈಕಿ 925 ಕೆರೆಗಳನ್ನು ನೀರು ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕಳೆದ 2024-25 ಮತ್ತು 2025-26ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ 9,829 ಹಾಗೂ ಗಿರಿಜನ ಉಪ ಯೋಜನೆಯಡಿ 6,165 ರೈತರಿಗೆ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಒದಗಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜೊತೆಗೆ 687 ಬ್ಯಾರೇಜ್, ಚೆಕ್ ಡ್ಯಾಂ ಹಾಗೂ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ 40,316 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ ಸೂಪರ್ ಎಲ್ ನಿನೋ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಬರದ ಸಂದರ್ಭದಲ್ಲೂ ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಅಂತರ್ಜಲ ಮಹತ್ವ ಸಾರಲು ಅಂತರ್ಜಲ ನಿರ್ದೇಶನಾಲಯದ ವತಿಯಿಂದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ರಾಜ್ಯಾದ್ಯಂತ ಆಂದೋಲನದ ರೂಪದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಲ್ಲಿ ಅಂತರ್ಜಲ ಮರುಪೂರಣ, ಮಿತ ಬಳಕೆ ಮತ್ತು ಕೆರೆ-ಕಟ್ಟೆಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುವುದು ಎಂದರು.

ಪ್ರಸಕ್ತ 2026-27ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,811 ಕೋಟಿ ರೂ. ಅಂದಾಜು ಮೊತ್ತದಲ್ಲಿ 8 ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು 88 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಕಳೆದ 2025-26ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಮತ್ತು ಸಣ್ಣ ನೀರಾವರಿ ಇಲಾಖೆ ಶೇ.50ರಷ್ಟು ಅನುದಾನ ಹಂಚಿಕೆಯಡಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಶಿರಪುರ ಮಾದರಿಯ ಸರಣಿ ಚೆಕ್ ಡ್ಯಾಂ ಮತ್ತು ಕೆರೆ ಅಭಿವೃದ್ಧಿಯ 13 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 10.65 ಕೋಟಿ ರೂ. ಖರ್ಚು ಮಾಡಲಾಗಿದೆ.

ಅದೇ ರೀತಿ ಪ್ರಸಕ್ತ 2026-27ನೇ ಸಾಲಿನಲ್ಲಿ ಕೆಕೆಆರ್‌ಡಿಬಿ, ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಲಾ 75 ಕೋಟಿ ರೂ. ಸೇರಿ ಒಟ್ಟು 225 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಉಳಿದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದು ಸಚಿವರು ತಿಳಿಸಿದರು.

ಕಲಬುರಗಿಯಲ್ಲಿ 343 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ
ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 343 ಕೋಟಿ ರೂ. ವೆಚ್ಚದಲ್ಲಿ ಮೂರು ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು 19 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಸೇಡಂ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 89.30 ಕೋಟಿ ರೂ. ವೆಚ್ಚದ ಬೀರನಳ್ಳಿ ಏತ ನೀರಾವರಿ ಯೋಜನೆ ಹಾಗೂ 82.50 ಕೋಟಿ ರೂ. ವೆಚ್ಚದ ಕಾಚೂರ ಹತ್ತಿರದ ಏತ ನೀರಾವರಿ ಯೋಜನೆಗಳು ಇದರಲ್ಲಿ ಸೇರಿವೆ.

ಇದಲ್ಲದೆ, 197.71 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ 9 ಕೆರೆಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ ಬೆಣ್ಣೆತೋರಾ ಜಲಾಶಯದ ಮೇಲ್ಭಾಗದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಚಿತ್ತಾಪುರ ತಾಲೂಕಿನಲ್ಲಿ 135 ಕೋಟಿ ರೂ. ವೆಚ್ಚದಲ್ಲಿ 9 ಕೆರೆಗಳನ್ನು ತುಂಬಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಜೇವರ್ಗಿ ತಾಲೂಕಿನ ಹರವಾಳದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಜಯ್ ಸಿಂಗ್ ತಿಳಿಸಿದರು.

ಜಿಲ್ಲೆಯ ಜನತೆ ಹಾಗೂ ವಿಶೇಷವಾಗಿ ಜೇವರ್ಗಿ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ಕಳೆದ 50 ವರ್ಷಗಳಿಂದ ನಮ್ಮ ಕುಟುಂಬಕ್ಕೆ ಜೇವರ್ಗಿ ಕ್ಷೇತ್ರದ ಮತದಾರರು ನೀಡಿರುವ ಆಶೀರ್ವಾದ ಮತ್ತು ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರದಿಂದ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಗಲು ಸಾಧ್ಯವಾಗಿದೆ. ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಹಾಗೂ ಜನರ ನಿರೀಕ್ಷೆಯಂತೆ ಜಿಲ್ಲೆ ಮತ್ತು ನಾಡಿನ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.

ಮೂರು ವರ್ಷದಲ್ಲಿ ಕೆಕೆಆರ್‌ಡಿಬಿಯಿಂದ 10 ಸಾವಿರ ಕೋಟಿ ರೂ. ಖರ್ಚು
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರು ವರ್ಷಗಳಲ್ಲಿ ಕೆಕೆಆರ್‌ಡಿಬಿ ಮಂಡಳಿಯಿಂದ 10 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಹಣವನ್ನು ಖರ್ಚು ಮಾಡುವುದಿಲ್ಲ ಎಂಬ ಅಪವಾದ ಮಂಡಳಿಯ ಮೇಲಿತ್ತು. ಆದರೆ ನಾನು ಅಧ್ಯಕ್ಷನಾದ ಬಳಿಕ 2023-24ರಲ್ಲಿ 2,009 ಕೋಟಿ ರೂ., 2024-25ರಲ್ಲಿ 3,358 ಕೋಟಿ ರೂ. ಹಾಗೂ 2025-26ರಲ್ಲಿ 4,137 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರಸಕ್ತ 2026-27ನೇ ಸಾಲಿನ ವರ್ಷಾಂತ್ಯಕ್ಕೆ 5,000 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಸಚಿವ ಅಜಯ್ ಸಿಂಗ್ ತಿಳಿಸಿದರು.

ಕಲಬುರಗಿಯಲ್ಲಿ ಸೈನ್ಸ್ ಸಿಟಿ ಸ್ಥಾಪನೆಗೆ ಯೋಜನೆ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಮೊದಲ ಸುತ್ತಿನ ಸಭೆ ನಡೆಸಲಾಗಿದೆ. ಕಲಬುರಗಿಯಲ್ಲಿ ಪ್ಲಾನೆಟೇರಿಯಂ, ಸೈನ್ಸ್ ಸೆಂಟರ್ ಹಾಗೂ ಸೈನ್ಸ್ ಸಿಟಿ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು. ಜಿಲ್ಲೆಯವರೇ ಆದ ಸಚಿವ ಪ್ರಿಯಾಂಕ್ ಖರ್ಗೆ ಅವರು ಐಟಿ-ಬಿಟಿ ಸಚಿವರಾಗಿರುವುದರಿಂದ ಅವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಈ ಯೋಜನೆಗಳ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ