Breaking News

ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ: 150ಕ್ಕೂ ಹೆಚ್ಚು ಸಂಘಟನೆಗಳಿಂದ ಹೋರಾಟಕ್ಕೆ ಸಿದ್ಧತೆ

Spread the love

ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಈ ಬಾರಿ ಪ್ರತಿಭಟನೆಗಳ ಅಬ್ಬರಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ರೈತರು, ಕಾರ್ಮಿಕರು, ನೌಕರರು, ವಕೀಲರು ಹಾಗೂ ವಿದ್ಯಾರ್ಥಿ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಜ್ಜಾಗಿವೆ.

ಈಗಾಗಲೇ 58 ಸಂಘಟನೆಗಳು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಒಟ್ಟಾರೆ 150ಕ್ಕೂ ಹೆಚ್ಚು ಸಂಘಟನೆಗಳು ಅಧಿವೇಶನದ ಅವಧಿಯಲ್ಲಿ ಹೋರಾಟ ನಡೆಸುವ ನಿರೀಕ್ಷೆಯಿದೆ.

ಕಬ್ಬು ಬೆಳೆಗಾರರ ಬೇಡಿಕೆ ಮತ್ತೆ ಮುನ್ನೆಲೆಗೆ

ಕಬ್ಬು ಬೆಳೆಗಾರರ ಸಮಸ್ಯೆ ಈ ಬಾರಿಯ ಅಧಿವೇಶನದಲ್ಲೂ ಪ್ರಮುಖವಾಗಿ ಪ್ರಸ್ತಾಪವಾಗಲಿದೆ. ಪ್ರತಿ ಟನ್ ಕಬ್ಬಿಗೆ 3,850 ರೂ. ದರ ನಿಗದಿಪಡಿಸಬೇಕು ಹಾಗೂ ರಾಜ್ಯ ಸರ್ಕಾರ 1,000 ರೂ. ಪ್ರೋತ್ಸಾಹಧನ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಹಿಂದಿನ ಹೋರಾಟದ ಬಳಿಕ ಕಬ್ಬಿನ ದರದ ವಿಚಾರದಲ್ಲಿ ತಾತ್ಕಾಲಿಕ ಪರಿಹಾರ ದೊರೆತಿದ್ದರೂ, ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂಬ ಅಸಮಾಧಾನ ರೈತರಲ್ಲಿದೆ. ಬೆಳೆ ನಷ್ಟ ಪರಿಹಾರ ಮತ್ತು ಸಾಲ ಮನ್ನಾ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ರೈತರು ಸಿದ್ಧತೆ ನಡೆಸಿದ್ದಾರೆ.

ಮೀಸಲಾತಿ, ವೇತನ ಹೆಚ್ಚಳಕ್ಕೂ ಆಗ್ರಹ

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಮತ್ತೊಮ್ಮೆ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ವಕೀಲರ ಮೇಲಿನ ಹಲ್ಲೆ ತಡೆಗಟ್ಟಲು ರಕ್ಷಣಾ ಕಾಯ್ದೆಯನ್ನು ಬಲಪಡಿಸಬೇಕು ಎಂದು ವಕೀಲರ ಸಂಘಟನೆಗಳು ಒತ್ತಾಯಿಸಲಿವೆ.

ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆಯ ನೌಕರರು ಸೇವಾ ಭದ್ರತೆಗಾಗಿ ಹೋರಾಟ ನಡೆಸಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಸಿಬ್ಬಂದಿ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಲಿದ್ದಾರೆ. ಶಾಲೆಗಳಲ್ಲಿ ಬಿಸಿಯೂಟವನ್ನು ಆಯಾ ಶಾಲೆಗಳಲ್ಲೇ ತಯಾರಿಸುವ ವ್ಯವಸ್ಥೆ ಮುಂದುವರಿಸಬೇಕು ಹಾಗೂ ಕ್ಲಸ್ಟರ್ ಕಿಚನ್ ಯೋಜನೆಯನ್ನು ಕೈಬಿಡಬೇಕು ಎಂಬ ಬೇಡಿಕೆಯೂ ಕೇಳಿಬರಲಿದೆ.

ವಿದ್ಯಾರ್ಥಿಗಳು, ಕಾರ್ಮಿಕರಿಂದಲೂ ಹೋರಾಟ

ವಿದ್ಯಾರ್ಥಿವೇತನ ಹಾಗೂ ವಸತಿ ನಿಲಯಗಳ ಸೌಲಭ್ಯ ಕಡಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಆಶಾ ಕಾರ್ಯಕರ್ತೆಯರು, ಗುತ್ತಿಗೆ ನೌಕರರು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿವೆ.

ಇದರ ಜತೆಗೆ ಅಲ್ಪಸಂಖ್ಯಾತರ ಮೀಸಲಾತಿ, ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ ಸೇರಿದಂತೆ ಹಲವು ವಿಚಾರಗಳು ಪ್ರತಿಭಟನೆಯ ಕಾವು ಹೆಚ್ಚಿಸುವ ಸಾಧ್ಯತೆಯಿದೆ.

ನಾಲ್ಕು ಸ್ಥಳಗಳಲ್ಲಿ ಪ್ರತಿಭಟನೆಗೆ ಅವಕಾಶ

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ. ಕೊಂಡಸಕೊಪ್ಪದ ಸುವರ್ಣ ಗಾರ್ಡನ್, ಹಳೆ ಪಿಬಿ ರಸ್ತೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ವಿವಿಧ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಭದ್ರತೆಗೆ 7 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಚಳಿಗಾಲದ ಅಧಿವೇಶನದ ಭದ್ರತೆಗಾಗಿ 7 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ. ಸುವರ್ಣ ವಿಧಾನಸೌಧದ ಸುತ್ತಲಿನ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಒಟ್ಟಾರೆ, ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಚರ್ಚೆ ನಡೆಯಲಿದ್ದು, ವಿವಿಧ ಸಂಘಟನೆಗಳ ಪ್ರತಿಭಟನೆಗಳು ಸರ್ಕಾರಕ್ಕೆ ಸವಾಲಾಗುವ ಸಾಧ್ಯತೆಯಿದೆ.

ಒಂದೆಡೆ ಸದನದ ಕಲಾಪ, ಮತ್ತೊಂದೆಡೆ ಹೋರಾಟಗಳ ಕಾವು… ಈ ಬಾರಿ ಬೆಳಗಾವಿಯ ಚಳಿಗಾಲದ ಅಧಿವೇಶನ ರಾಜಕೀಯ ಹಾಗೂ ಹೋರಾಟದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.


Spread the love

About Laxminews 24x7

Check Also

ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ಜಪಾನ್‌ನಿಂದ ಬಂದು ಉತ್ತರ ಕೊಡ್ತೀನಿ: ಎಂ.ಬಿ. ಪಾಟೀಲ್

Spread the loveಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ  ವಿರುದ್ಧ ಸಚಿವ ಎಂ.ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ