Breaking News

ಜ್ಞಾನದ ಮೂಲಕ ಜಗತ್ತನ್ನು ಎದುರಿಸಲು ಸಾಧ್ಯ, ಉಳಿದೆಲ್ಲವೂ ನಗಣ್ಯ: ಶ್ರವಣ ನಾಯ್ಕ

Spread the love

ಬೆಳಗಾವಿ: ಜ್ಞಾನ ಹಾಗೂ ಅನ್ವೇಷಣೆಗಳಿಗೆ ಸಂಶೋಧನಾ ಕಮ್ಮಟ ಉತ್ತಮ ವೇದಿಕೆಯಾಗಿದ್ದು, ನಾವು ಸಂಪಾದಿಸಿದ ಜ್ಞಾನವನ್ನು ಯಾರಿಂದಲೂ ಕಳವು ಮಾಡಲು ಸಾಧ್ಯವಿಲ್ಲ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಶ್ರವಣ ನಾಯ್ಕ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ (ನ.23) ಆಯೋಜಿಸಿದ್ದ ಎರಡು ದಿನಗಳ ಸಂಶೋಧನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜ್ಞಾವಂತರಾಗಿ ಪಡೆದ ಜ್ಞಾನವನ್ನು ಚಿಂತನ-ಮಂಥನದ ಮೂಲಕ ವಿಷಯ ಪರಿಣತರೊಂದಿಗೆ ಚರ್ಚಿಸಿ, ಹೊಸ ಸಂಶೋಧನಾ ಮಾರ್ಗಗಳನ್ನು ಕಂಡುಕೊಳ್ಳಬೇಕು. ಜ್ಞಾನದ ಮೂಲಕ ಮಾತ್ರ ಜಗತ್ತನ್ನು ಎದುರಿಸಲು ಸಾಧ್ಯವಾಗುತ್ತದೆ. ಉಳಿದೆಲ್ಲವೂ ನಗಣ್ಯ. ಆದ್ದರಿಂದ ಸಂಶೋಧನಾರ್ಥಿಗಳು ಎರಡು ದಿನಗಳ ಕಮ್ಮಟದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎಚ್. ಶಶಿಕಲಾ, ಸಂಶೋಧನೆಯ ಮೂಲ ಉದ್ದೇಶ ಸತ್ಯಶೋಧನೆಯಾಗಿದೆ. ಪ್ರಸ್ತುತ ಸಂಶೋಧನೆಯು ಒಂದು ವಿಷಯವನ್ನು ವಿವಿಧ ಆಯಾಮಗಳಿಂದ ವಿಶ್ಲೇಷಿಸುವ ವಿಸ್ತೃತ ಸ್ವರೂಪ ಪಡೆದುಕೊಂಡಿದೆ. ವಿಷಯದ ಆಯ್ಕೆ, ಪರಿಕರಗಳ ಬಳಕೆ ಹಾಗೂ ವ್ಯಾಖ್ಯಾನಗಳ ಸ್ವರೂಪ ಬದಲಾವಣೆ ಸಂಶೋಧನೆಯಲ್ಲಿ ಪ್ರಮುಖ ಸವಾಲುಗಳಾಗಿವೆ. ಸಂಶೋಧನಾರ್ಥಿಗಳು ತಾಳ್ಮೆಯಿಂದ ವಿಷಯವನ್ನು ವಿಶ್ಲೇಷಿಸಿ, ಯಾವುದೇ ಅಡ್ಡದಾರಿ ಹಿಡಿಯದೆ ಸತ್ಯಶೋಧನೆಗೆ ಆದ್ಯತೆ ನೀಡಬೇಕು ಎಂದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ, ಬದಲಾವಣೆಯನ್ನು ಬಯಸುವುದು ಸಂಶೋಧಕನ ಕರ್ತವ್ಯ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ನಿರಂತರ ಶೈಕ್ಷಣಿಕ ಚಟುವಟಿಕೆಗಳು ಸಂಶೋಧನಾರ್ಥಿಗಳ ಜ್ಞಾನ ಮತ್ತು ಸಾಮರ್ಥ್ಯವನ್ನು ವೃದ್ಧಿಸುವಂತಿರಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಶೋಭಾ ನಾಯಕ್, ಸಂಶೋಧನೆಯು ಜ್ಞಾನ, ಅನ್ವೇಷಣೆ ಹಾಗೂ ಹೊಸ ಚಿಂತನೆಗಳ ಮೂಲಕ ಹೊಸ ಸತ್ಯಗಳನ್ನು ಕಂಡುಕೊಳ್ಳಲು ಮತ್ತು ಹೊಸ ದಿಕ್ಕನ್ನು ನೀಡಲು ಸಹಕಾರಿಯಾಗಿದೆ. ವಿಭಿನ್ನ ಶೈಕ್ಷಣಿಕ ಆಶಯಗಳೊಂದಿಗೆ ಸಂಶೋಧನೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವುದು ಈ ಕಮ್ಮಟದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಗಜಾನನ ನಾಯ್ಕ ಮಾತನಾಡಿ, ಸಂಶೋಧನೆಯು ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಕಮ್ಮಟವು ಸಂಶೋಧನಾರ್ಥಿಗಳಿಗೆ ದಾರಿದೀಪವಾಗಲಿ. ಎಲ್ಲರೂ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೊಸ ವಿಚಾರಗಳನ್ನು ಮಂಡಿಸುವ ಮೂಲಕ ಉತ್ತಮ ಅನ್ವೇಷಕರಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ, ಡಾ. ಹನುಮಂತ ಸಂಜಿವಣ್ಣವರ, ಡಾ. ಕುಶಾಲ ಬಿ.ಸಿ. ಸೇರಿದಂತೆ ವಿಭಾಗದ ಸಂಶೋಧನಾರ್ಥಿಗಳು ಭಾಗವಹಿಸಿದ್ದರು.

ಸಂತೋಷ ಉಂಡಾಡಿ ಸ್ವಾಗತಿಸಿದರು. ಮಹೇಶ್ವರಿ ನಿರೂಪಿಸಿದರು. ಮಹಾದೇವ ಕೊಪ್ಪದ ವಂದಿಸಿದರು.


Spread the love

About Laxminews 24x7

Check Also

ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ಜಪಾನ್‌ನಿಂದ ಬಂದು ಉತ್ತರ ಕೊಡ್ತೀನಿ: ಎಂ.ಬಿ. ಪಾಟೀಲ್

Spread the loveಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ  ವಿರುದ್ಧ ಸಚಿವ ಎಂ.ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ