Breaking News

ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ ಅನಿವಾರ್ಯ:ಡಾ. ಸಂದೀಪ್ ಶ್ರೀವಾತ್ಸವ

Spread the love

ಬೆಳಗಾವಿ: ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಅದು ಅತ್ಯವಶ್ಯಕವಾಗಿದೆ. ಆರೋಗ್ಯ ಸೇವೆಯಲ್ಲಿನ ಸಂಕೀರ್ಣ ಪ್ರಕ್ರಿಯೆಗಳನ್ನು ಸರಳಗೊಳಿಸುವುದರ ಜೊತೆಗೆ ಕಾರ್ಯಕ್ಷಮತೆ ಹೆಚ್ಚಿಸಿ, ರೋಗಿಗಳಿಗೆ ಉತ್ತಮ ಸೇವೆ ಒದಗಿಸುವಲ್ಲಿ ಎಐ ಮಹತ್ವದ ಪಾತ್ರ ವಹಿಸಲಿದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶ್ರೀವಾತ್ಸವ ಅಭಿಪ್ರಾಯಪಟ್ಟರು.

ಉತ್ತಮ ವೈದ್ಯಕೀಯ ಫಲಿತಾಂಶ ಪಡೆಯಲು ಬಳಸುವ ದತ್ತಾಂಶ ನೈಜವಾಗಿರಬೇಕು. ಅದರ ಸಮರ್ಪಕ ಪರಿಶೀಲನೆ ನಡೆಸಿ, ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಎಐ ತಂತ್ರಜ್ಞಾನದ ಬಳಕೆ ಸ್ವಾಗತಾರ್ಹವಾಗಿದ್ದರೂ, ವೈದ್ಯರ ವೈದ್ಯಕೀಯ ಜ್ಞಾನ, ಅನುಭವ, ಕೌಶಲ್ಯ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕರ್ನಲ್ ಎಂ. ದಯಾನಂದ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಕೆಎಲ್‌ಇ ಸಂಸ್ಥೆ ಬದ್ಧವಾಗಿದೆ. ತಂತ್ರಜ್ಞಾನದ ಆವಿಷ್ಕಾರಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತಿರಬೇಕು. ತಂತ್ರಜ್ಞಾನ ಬಳಕೆಯಲ್ಲಿ ರೋಗಿಗಳ ಸುರಕ್ಷತೆ ಹಾಗೂ ದತ್ತಾಂಶದ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಶೃಂಗಸಭೆಯಲ್ಲಿ ಸ್ಟಾರ್ ಹಾಸ್ಪಿಟಲ್ಸ್‌ನ ರಾಜೇಂದ್ರ ಕ್ಷೀರಸಾಗರ ಅವರು ಡಿಜಿಟಲ್ ಆರೋಗ್ಯ ಮಾನದಂಡಗಳ ಕುರಿತು, ನುವರ್ಟ್ ಸಂಸ್ಥಾಪಕ ನಿತಿನ್ ಗುಪ್ತಾ ಅವರು ಆಸ್ಪತ್ರೆಗಳಲ್ಲಿ ಎಐ ತಂತ್ರಜ್ಞಾನದ ಅನುಷ್ಠಾನದ ಕುರಿತು ಉಪನ್ಯಾಸ ನೀಡಿದರು.

ಇದೇ ವೇಳೆ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದ ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಹಾದಿ ಕುರಿತು ಲಾವಣ್ಯ ಕನಗರಾಜ, ಸುಂದರ್ ಅರುಮುಗಂ, ಸುನಿಲ್ ಬೆಳೂರು ಹಾಗೂ ಡಾ. ಅನಿಲ್ ಮಲ್ಲೇಶಪ್ಪ ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಶ್ ಪವಾರ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಶ್ವನಾಥ್ ಪಟ್ಟಣಶೆಟ್ಟಿ, ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸಸ್ ನಿರ್ದೇಶಕ ಡಾ. ಮಾಧವ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಸ್ಪತ್ರೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ರವಿ ಸಂಕೇಶ್ವರ ವಂದಿಸಿದರು.

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಪುಣೆ, ಹುಬ್ಬಳ್ಳಿ ಹಾಗೂ ಬೆಳಗಾವಿ ಸೇರಿದಂತೆ ವಿವಿಧ ನಗರಗಳ ಪ್ರಮುಖ ಆಸ್ಪತ್ರೆಗಳ ಸಿಇಒಗಳು, ವೈದ್ಯಕೀಯ ನಿರ್ದೇಶಕರು ಮತ್ತು ಐಟಿ ತಜ್ಞರು ಸೇರಿದಂತೆ 150ಕ್ಕೂ ಹೆಚ್ಚು ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.


Spread the love

About Laxminews 24x7

Check Also

ನಿನಗೊಂದು ಗತಿ ಕಾಣಿಸುತ್ತೇನೆ ಅಂತ ಹೆಂಡತಿ ಸ್ನೇಹಿತನಿಗೆ ಆಸಿಡ್ ಎರಚಿದ ಪತಿ!

Spread the loveಬೆಂಗಳೂರು: ಹೆಂಡತಿಯ ಜೊತೆ ಆಕೆಯ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪತಿ ಆಸಿಡ್‌ ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ