ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್, ಗೀತಾ ಜೈಲುಪಾಲಾಗಿದ್ದಾರೆ.
ಎಸ್‌ಐಟಿ ಅಧಿಕಾರಿಗಳಿಂದ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಗರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದೆ. ಜಾರಿ ನಿರ್ದೇಶನಾಲಯವು ಹೈಕೋರ್ಟ್‌ಗೆ ತನಿಖೆಯ ವಿವರ ಸಲ್ಲಿಕೆ ಮಾಡಿದೆ. ಈ ವೇಳೆ ಹೈಕೋರ್ಟ್, ಇಡಿ ತನಿಖೆ ನೋಡಿದರೆ ಮತ್ತಷ್ಟು ಎಫ್‌ಐಆರ್ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಕೆಪಿಎಸ್‌ಸಿ ಹೀಗೆ ಕೆಲಸ ಮಾಡಿದರೆ ಜನಸಾಮಾನ್ಯರ ಗತಿ ಏನು? ಮೆರಿಟ್ ಗಾಳಿಗೆ ತೂರಿ ಹೇಗೆಲ್ಲಾ ನೇಮಕಾತಿ ಮಾಡಿದ್ದಾರೆ. ನೇಮಕಾತಿ ವ್ಯವಸ್ಥೆ ಮೇಲಿನ ಜನಸಾಮಾನ್ಯರ ನಂಬಿಕೆ ಹಾಳಾಗಿದೆ. ಹೀಗಾದರೆ ಜನ ಕಷ್ಟಪಟ್ಟು ರಾತ್ರಿ ಎಲ್ಲಾ ಓದಿ ಆಫೀಸರ್ ಆಗಲು ಸಾಧ್ಯವೇ? ಕೆಪಿಎಸ್‌ಸಿ ಯುಪಿಎಸ್‌ಸಿ ರೀತಿ ಏಕೆ ಕೆಲಸ ಮಾಡುವುದಿಲ್ಲ? ಕೆಪಿಎಸ್‌ಸಿಯ ಪ್ರತಿ ನೇಮಕದಲ್ಲೂ ಹಗರಣವಾಗುತ್ತಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇಡಿ ನೀಡಿರುವ ಮಾಹಿತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಎಸ್‌ಪಿಪಿ ಜಗದೀಶ್ ತಿಳಿಸಿದ್ದಾರೆ. ಅದಕ್ಕೆ ಹೈಕೋರ್ಟ್, ಕೆಪಿಎಸ್‌ಸಿ ನಡೆಸಿದ ಹಲವು ನೇಮಕಗಳಲ್ಲಿ ಅಕ್ರಮವಾಗಿದೆ. ಇಡಿ ಎಸ್‌ಐಟಿಯೊಂದಿಗೆ ಶಾಕಿಂಗ್ ಮಾಹಿತಿ ಹಂಚಿಕೊಂಡಿದೆ. ಇಡಿ ಹಂಚಿಕೊಂಡಿರುವ ಮಾಹಿತಿ ಬಗ್ಗೆಯೂ ಎಫ್‌ಐಆರ್ ದಾಖಲಿಸಬೇಕು. ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಎಸ್‌ಐಟಿಗೆ ವರ್ಗಾಯಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
Laxmi News 24×7